ಸುಣ್ಣದ ಗುಮ್ಮಿಗೆ ಸೂಕ್ತ ಬದಲಿ ಜಾಗ ಕಲ್ಪಿಸಲು ಆಗ್ರಹ

| Published : Jan 18 2025, 12:47 AM IST

ಸಾರಾಂಶ

ಸುಣ್ಣದ ಗುಮ್ಮಿಗೆ ಸೂಕ್ತ ಪರ್ಯಾಯ ಜಾಗ ಒದಗಿಸಿ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಸುಣ್ಣತಯಾರು ಮಾಡುವವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸುಣ್ಣದ ಗುಮ್ಮಿಗೆ ಸೂಕ್ತ ಪರ್ಯಾಯ ಜಾಗ ಕಲ್ಪಿಸುವಂತೆ ಸುಣ್ಣ ತಯಾರು ಮಾಡುವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ನಗರದ ಜೋಗಿಮಟ್ಟಿ ರಸ್ತೆಯಲ್ಲಿನ ಸುಣ್ಣದಗುಮ್ಮಿ ಸ್ಥಳಾಂತರ ಮಾಡಲು ನಗರಸಭೆ ನಿರ್ಧಾರ ಮಾಡಿದೆ. ಈ ಸಂಬಂದ ಜಾಗ ಖಾಲಿ ಮಾಡಲು ಸೂಚನೆ ನೀಡಿದೆ. ಆದರೆ ಸುಣ್ಣದ ಗುಮ್ಮಿ ನಿರ್ಮಿಸಿ ಬದುಕು ಕಟ್ಟಿಕೊಳ್ಳಲು ಬದಲಿ ಸೂಕ್ತಜಾಗ ನೀಡಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದರು.

ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆ 5ನೇ ಕ್ರಾಸ್ ಪ್ರದೇಶದಲ್ಲಿ ಸುಮಾರು 20 ರ ರಿಂದ 30 ಸುಣ್ಣ ಸುಡುವ ಗುಮ್ಮಿಗಳಿದ್ದು ಈ ಪ್ರದೇಶ ಒಂದು ಕಾಲದಲ್ಲಿ ಊರಿನ ಹೊರಭಾಗದಲ್ಲಿತ್ತು. ತಾತ-ಮುತ್ತಾತನ ಕಾಲದಿಂದಲೂ ಸುಣ್ಣ ಸುಡುತ್ತಾ ಜೀವನ ಸಾಗಿಸುತ್ತಾ ಬಂದಿ್ದ್ದೇವೆ.ಸುಮಾರು 150 ಕುಟುಂಬಗಳಿಗೆ ಸುಣ್ಣ ಸುಡುವುದು ನಿತ್ಯ ಕಾಯಕವಾಗಿದ್ದು ಇದನ್ನೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ಏಕಾ ಏಕಿ ಸುಣ್ಣದ ಗುಮ್ಮಿ ಸ್ಥಳಾಂತರ ಮಾಡಿದರೆ ಆಗುವ ತೊಂದರೆಗೆ ಯಾರು ಜವಾಬ್ದಾರಿ ಎಂದರು.

ಸುಣ್ಣ ಸುಡುವ ನಾವುಗಳು ಅವಿದ್ಯಾವಂತರಾಗಿದ್ದು ಈಗಾಗಲೇ ಅರ್ಧ ವಯಸ್ಸನ್ನು ಕಳೆದಿದ್ದೇವೆ. ಬದುಕಿಗೆ ಬೇರೆ ಕೆಲಸ ಮಾಡಲು ನಮಗೆ ಕಷ್ಟ ಸಾಧ್ಯ. ಪರ್ಯಾಯ ಉದ್ಯೋಗವೂ ಇಲ್ಲ. ಊರು ಬೆಳೆದಂತೆ ಸುಣ್ಣದ ಗುಮ್ಮಿಗಳು ಊರಿನ ಮಧ್ಯಭಾಗದಲ್ಲಿಇದ್ದಂತೆ ಭಾಸವಾಗಿವೆ. . ಈ ಮೊದಲು ಸಾಕಷ್ಟು ಭಾರಿ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಅರ್ಜಿ ಸಲ್ಲಿಸಿ ಪರ್ಯಾಯ ಜಾಗ ಕಲ್ಪಸಿಕೊಡಲು ಮನವಿ ಮಾಡಿದ್ದು ಯಾವುದೇ ಫಲಕಾರಿಯಾಗಿಲ್ಲವೆಂದು ಪ್ರತಿಭಟನಾಕಾರರು ನೋವು ತೋಡಿಕೊಂಡರು.

ಶಾಸಕ ವೀರೇಂದ್ರ ಪಪ್ಪಿ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಸಮಸ್ಯೆ ಆಲಿಸಿದ್ದಾರೆ. ಆದರೂ ನಗರಸಭೆ ಪೌರಾಯುಕ್ತರು ಯಾವುದೇ ನೋಟೀಸ್ ನೀಡದೆ ಏಕಾಏಕಿ ಜೆಸಿಬಿ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆಯ ನೆರವಿನೊಂದಿಗೆ ಸುಣ್ಣದ ಗುಮ್ಮಿಗಳನ್ನು ಕೆಡವಲು ಮುಂದಾಗಿದ್ದಾರೆ. ಇದು ಬದುಕಿಗೆ ಕೊಳ್ಳಿ ಇಡುವ ಕೃತ್ಯವಾಗಿದೆ. ನಾವುಗಳು ಸುಣ್ಣದಗುಮ್ಮಿಯ ಸ್ಥಳಾಂತರ ಮಾಡಲು ಸಿದ್ದರಿದ್ದೇವೆ. ಆದರೆ ಸೂಕ್ತವಾದ ಜಾಗ ಮತ್ತು ಸೌಲಭ್ಯವನ್ನು ನೀಡಿದಲ್ಲಿ ಹೋಗುತ್ತೇವೆ ಎಂದರು.

ಹಿಂದೆ ಹೊಳಲ್ಕೆರೆ ರಸ್ತೆಯಲ್ಲಿರುವ ಮಂಡಕ್ಕಿ ಭಟ್ಟಿಗಳು ಸಹ ಊರಿನ ಮಧ್ಯಭಾಗದಲ್ಲಿದ್ದು ಅವುಗಳನ್ನು ಊರಿನ ಹೊರಭಾಗದ ಹಳೆ ಬೆಂಗಳೂರು ರಸ್ತೆಗೆ ಸೂಕ್ತ ಮೂಲಭೂತ ಸೌಲಭ್ಯಗಳೊಂದಿಗೆ ಸ್ಥಳಾಂತರಿಸಲಾಗಿರುತ್ತದೆ. ಇದೇ ರೀತಿ ಸುಣ್ಣದ ಗುಮ್ಮಿಗಳಿಗೂ ಮೂಲಭೂತ ಸೌಲಭ್ಯಗಳೊಂದಿಗೆ, ಸೂಕ್ತ ಜಾಗವನ್ನು ನೀಡಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ. ಪರ್ಯಾಯ ಜಾಗಕ್ಕೆ ಆಗ್ರಹಿಸಿ ತಹಶೀಲ್ದಾರ್ ಹಾಗೂ ನಗರಸಭೆ ಆಯುಕ್ತರಿಗೆ ಇದೇ ವೇಳೆ ಮನವಿ ಸಲ್ಲಿಸಲಾಯಿತು.

ನಗರಸಭೆ ಮಾಜಿ ಸದಸ್ಯ ಮಹೇಶ್, ಮುಖಂಡರಾದ ರಾಜಣ್ಣ, ಸಿದ್ದರಾಜು, ಗೋಪಿ, ನಾಗರಾಜು, ಶಿವು, ಬಸವರಾಜು, ನಿಂಗರಾಜು, ತಿಪ್ಪೇರುದ್ರಪ್ಪ, ರಾಘವೇಂದ್ರ, ಜಯ್ಯಣ್ಣ, ರೇಖಾ, ಕರಿಬಸಮ್ಮ, ಸಿಂಧೂ, ರಾಧಮ್ಮ, ಜ್ಯೋತಿ, ಶೈಲಾ, ಕಮಲಮ್ಮ, ಕಾವೇರಿ, ಸುಮಕ್ಕ, ಭೂಮಿಕ ಪ್ರತಿಭಟನೆ ನೇತೃತ್ವ ವಹಿಸಿದ್ದರು.