ಲಕ್ಷ್ಮೇಶ್ವರ ಪಟ್ಟಣದ 2ನೇ ವಾರ್ಡ್‌ನಲ್ಲಿ ಬರುವ ಕರೆಗೋರಿ ಪ್ಲಾಟ್‌ಗಳಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಅಲ್ಲಿನ ನಿವಾಸಿಗಳು ಪುರಸಭೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಲಕ್ಷ್ಮೇಶ್ವರ: ಪಟ್ಟಣದ 2ನೇ ವಾರ್ಡ್‌ನಲ್ಲಿ ಬರುವ ಕರೆಗೋರಿ ಪ್ಲಾಟ್‌ಗಳಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಅಲ್ಲಿನ ನಿವಾಸಿಗಳು ಪುರಸಭೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಂಜುನಾಥ ಮಾಗಡಿ ಮಾತನಾಡಿ, 30 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಕರೆಗೋರಿ ಆಶ್ರಯ ನಿವಾಸಿಗಳು ಮೂಲ ಸೌಲಭ್ಯಗಳಾದ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರು ಇಲ್ಲದೆ ಪರದಾಡುತ್ತಿದ್ದಾರೆ. ಈ ಕುರಿತು ಹಲವು ಬಾರಿ ಪುರಸಭೆಯ ಆಡಳಿತ ಮಂಡಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆಶ್ರಯ ನಿವಾಸಿಗಳು ರಸ್ತೆ ಇಲ್ಲದೆ ಕೆಸರು ಗದ್ದೆಗಳಾಗಿವೆ. ಮಕ್ಕಳು ಮರಿಗಳು, ವೃದ್ದರು ಇಂತಹ ಕಚ್ಚಾರಸ್ತೆಯಲ್ಲಿ ಸಂಚಾರ ಮಾಡಲು ಅಂಜುವಂತಾಗಿದೆ. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ಇರುವುದರಿಂದ ಕೊಳಚೆ ನೀರು ಚರಂಡಿಗಳಲ್ಲಿ ನಿಂತು ಗಬ್ಬುನಾತ ಬೀರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ ಎಂದು ಹೇಳಿದರು. ಬೀದಿದೀಪಗಳು ಇಲ್ಲದೆ ಇಲ್ಲಿನ ಜನರು ರಾತ್ರಿ ವೇಳೆಯಲ್ಲಿ ಹಾವು ಚೇಳುಗಳ ಭಯದಿಂದ ಸಂಚಾರ ಮಾಡಲು ಹೆದರುವಂತಾಗಿದೆ. ಲಕ್ಷ್ಮೇಶ್ವರ ಪಟ್ಟಣಕ್ಕೆ ತುಂಗಭದ್ರಾ ನದಿ ನೀರು ಕೊಡುತ್ತಿದ್ದರೂ, ಕರೆಗೋರಿ ಪ್ಲಾಟ್ ನಿವಾಸಿಗಳು ಕೊಳವೆಬಾವಿ ನೀರೇ ಗತಿಯಾಗಿವೆ ಎಂಬುದು ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಾಗಿದೆ. ಇಷ್ಟಾದರೂ ಯಾವೊಬ್ಬ ಜನಪ್ರತಿನಿಧಿಯೂ ನಮ್ಮ ಗೋಳು ಕೇಳುವವರೂ ಇಲ್ಲದಂತಾಗಿದೆ. ಈ ಬಾರಿ ನಮ್ಮ ಮನವಿಗೆ ಸ್ಪಂದಿಸಿ ಅಧಿಕಾರಿಗಳು ಕರೆಗೋರಿ ಆಶ್ರಯ ನಿವಾಸಿಗಳ ಸಮಸ್ಯೆ ಬಗೆಹರಿಸದೆ ಹೋದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಅವರು ಹೇಳಿದರು.

ರಾಜಪ್ಪ ಕಣಿವಿ, ಮಂಜುನಾಥ ಸಂಶಿ, ಸುರೇಶ್ ಮಾಗಡಿ, ಮಂಜುನಾಥ ಗೊರುವರ, ಮುತ್ತು ಅಮರಶೆಟ್ಟಿ, ಮಾಂತೇಶ ಗೊರವರ, ಚಂದ್ರು ಮುಳುಗುಂದ, ಕೊಟ್ರಮ್ಮ ಅಗಸಿಬಾಗಿಲು, ಸಚಿನ್ ಹೆಬ್ಬಾಳ, ದ್ಯಾಮವ್ವ ಕಟಗಿ, ಹನುಮಂತಪ್ಪ ಮುಶಪ್ಪನವರ, ಬಸಣ್ಣ ಹುಬ್ಬಳ್ಳಿ, ನಾಗರಾಜ್ ಚಿಂಚಲಿ, ಮುತ್ತು ಬೆಲ್ಲದ, ಪವನ ಬಂಕಾಪುರ, ಮಂಜು ಸಾಲ್ಮನಿ, ಆನಂದ್ ಬೂದಿಹಾಳ ಇದ್ದರು.