ಸರ್ಕಾರಿ ಶಾಲೆಗೆ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

| Published : Aug 26 2025, 01:05 AM IST

ಸಾರಾಂಶ

ತಾಂಡಾದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ಪೂರ್ಣ ಹಾಳಾಗಿದ್ದು, ಅದನ್ನು ತೆರವುಗೊಳಿಸಿ ಹೈಟೆಕ್ ಶೌಚಾಲಯ ನಿರ್ಮಿಸಬೇಕು.

ರಾಣಿಬೆನ್ನೂರು: ತಾಲೂಕಿನ ದೇವರಗುಡ್ಡದ ತಾಂಡಾದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೈಟೆಕ್ ಶೌಚಾಲಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಹಾಗೂ ದೇವರಗುಡ್ಡ ಗ್ರಾಪಂಗೆ ಹೊಸ ಪಿಡಿಒ ನೇಮಕ ಮಾಡಲು ಆಗ್ರಹಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ತಾಪಂ ಇಒ ಪರಮೇಶ ಅವರಿಗೆ ಮನವಿ ಸಲ್ಲಿಸಿದರು. ಸಂಘಟನೆ ತಾಲೂಕು ಅಧ್ಯಕ್ಷ ಚಂದ್ರಪ್ಪ ಬಣಕಾರ ಮಾತನಾಡಿ, ತಾಂಡಾದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ಪೂರ್ಣ ಹಾಳಾಗಿದ್ದು, ಅದನ್ನು ತೆರವುಗೊಳಿಸಿ ಹೈಟೆಕ್ ಶೌಚಾಲಯ ನಿರ್ಮಿಸಬೇಕು. ಶಾಲೆಗೆ ಗೇಟ್ ಇಲ್ಲದ ಕಾರಣ ದುಷ್ಕರ್ಮಿಗಳು ಶಾಲೆಯಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಾ ಅಲ್ಲಿನ ಆವರಣವನ್ನು ಗಲೀಜು ಮಾಡುತ್ತಿದ್ದಾರೆ. ಕೂಡಲೇ ಶಾಲೆಗೆ ಹೊಸ ಗೇಟ್ ಹಾಗೂ ಕಾಂಪೌಂಡ್ ನಿರ್ಮಿಸಬೇಕು ಎಂದು ಅಗ್ರಹಿಸಿದರು.ಗ್ರಾಮದ ಆನಂದ ಲಮಾಣಿ ಮಾತನಾಡಿ, ಶಾಲೆಯ ಆವರಣದಲ್ಲಿ ಬೆಳೆದಿರುವ ಗಿಡ- ಗಂಟಿಗನ್ನು ವೀಕ್ಷಿಸಿದರೆ ಇದು ಶಾಲಾ ಆವರಣವೋ, ಗೋಮಾಳ ಜಾಗವೋ, ಅಡವಿಯೋ ಗೊತ್ತಾಗುತ್ತಿಲ್ಲ. ಇದರ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೂಡಲೇ ಶಾಲಾ ಆವರಣದಲ್ಲಿ ಬೆಳೆದು ನಿಂತ ಗಿಡ- ಗಂಟಿಗಳನ್ನು ಸ್ವಚ್ಛ ಮಾಡಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇಲ್ಲದಿರುವುದರಿಂದ ಕಾರ್ಯ ನಿರ್ವಹಿಸಲು ಪ್ರಭಾರಿ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಹೀಗಾಗಿ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. ಕೂಡಲೇ ಪಂಚಾಯಿತಿಗೆ ಹೊಸದಾಗಿ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಬೇಕು ಎಂದು ಆಗ್ರಹಿಸಿದರು.ಸಂಘಟನೆಯ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಸಾವಕ್ಕಳವರ, ಪರಶುರಾಮ ಕುರುವತ್ತಿ, ರಿಯಾಜ್ ದೊಡ್ಡಮನಿ, ರೇವಣಸಿದ್ಧಯ್ಯ ಸಣ್ಣಸಂಗಾಪುರ, ನಾಗರಾಜ ಪೂಜಾರ, ಹನುಮಂತ ಚಳಗೇರಿ, ಮಹೇಶ ಹಲವಾಗಿಲು ಮತ್ತಿತರರಿದ್ದರು.