ಸಾರಾಂಶ
ಕನ್ನಡಪ್ರಭ ವಾರ್ತೆ ಕಂಪ್ಲಿ
ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ನಿಂದ ಬುಧವಾರ ಪ್ರತಿಭಟನೆ ನಡೆಸಿ, ಪುರಸಭಾಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.ಫೆಡರೇಷನ್ ತಾಲೂಕು ಅಧ್ಯಕ್ಷ ಐ. ಹೊನ್ನೂರ್‌ಸಾಬ್ ಮಾತನಾಡಿ, ಕಟ್ಟಡ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಎಲ್ಲ ಜಾತಿಯ ಗಾರೆ, ಎಲೆಕ್ಟ್ರಿಷಿಯನ್, ಪೇಂಟರ್, ಪಿಒಪಿ, ಟೈಲ್ಸ್, ಇಟ್ಟಂಗಿ ಬಟ್ಟಿ ಕಾರ್ಮಿಕರು, ಬಡಿಗ ಇತರೆ ಕಾರ್ಮಿಕರಿಗೆ ಸ್ವಂತ ನಿವೇಶನ, ಮನೆಗಳಿಲ್ಲದೆ ತೀರ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಕಾರ್ಮಿಕರಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸುವಂತೆ ಅನೇಕ ಬಾರಿ ಸಂಬಂಧಪಟ್ಟಂತಹ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ನಾವು ಆರ್ಥಿಕವಾಗಿ ಹಿಂದುಳಿದಿದ್ದು ಲಕ್ಷಾಂತರ ರೂಪಾಯಿ ವ್ಯಯಿಸಿ ನಿವೇಶನ ಕೊಳ್ಳಲು ಶಕ್ತಿ ಇಲ್ಲ. ಈ ಕುರಿತು ಪುರಸಭಾಡಳಿತ, ಅಧ್ಯಕ್ಷರು ಹಾಗೂ ಶಾಸಕರು ಗಮನ ಹರಿಸಿ ಕಾರ್ಮಿಕರ ಹಿತ ದೃಷ್ಟಿಯಿಂದಾಗಿ ನಿವೇಶನ, ವಸತಿ ಸೌಲಭ್ಯ ಕಲ್ಪಿಸಲು ವಾರ್ಡ್ ಮಟ್ಟದ ಅರ್ಹ ಫಲಾನುಭವಿಗಳ ಆಯ್ಕೆ ಪಟ್ಟಿ ಪ್ರಕಟಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರಲ್ಲದೆ, ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳುವ ಕುರಿತು ಎಚ್ಚರಿಕೆ ನೀಡಿದರು.
ಪುರಸಭಾಧ್ಯಕ್ಷ ಭಟ್ಟ ಪ್ರಸಾದ್ ಕಾರ್ಮಿಕರ ಮನವಿ ಸ್ವೀಕರಿಸಿ, ಶಾಸಕರು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಪ್ರತಿಭಟನಾ ಮೆರವಣಿಗೆ:
ಇಲ್ಲಿನ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಡಾ. ರಾಜ್ ಕುಮಾರ ರಸ್ತೆ ಮಾರ್ಗವಾಗಿ ಪುರಸಭಾಂಗಣದಲ್ಲಿ ಸಮಾವೇಶಗೊಂಡಿತು.ಪ್ರತಿಭಟನೆಯಲ್ಲಿ ಪ್ರಮುಖರಾದ ಆರ್. ನಾಗರಾಜ, ಬಂಡಿ ಬಸವರಾಜ, ಜೆ. ಸತ್ಯಬಾಬು, ಯಲ್ಲಾಲಿಂಗ, ಎಚ್. ಹೊನ್ನಮ್ಮ, ಎಚ್. ಗಂಗಮ್ಮ, ಕೆ.ಮಂಜು, ಮೈಬು, ಎಂ. ನೂರು, ಕೇದಾರನಾಥ, ನರಸಿಂಹ, ರುದ್ರಪ್ಪ, ಕೊನ್ನಾಪುರ ನಾಗರಾಜ, ಅಂಜಿನಮ್ಮ, ಪೇಂಟರ್ ನಾಗರಾಜ, ಎಲೆಕ್ಟ್ರಿಷಿಯನ್ ಚಂದ್ರಶೇಖರ್ ನಾನಾ ನಿರ್ಮಾಣ ಕಾರ್ಮಿಕರಿದ್ದರು.