ತಾಲೂಕಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ವಸತಿ ರಹಿತ ಬಡವರಿಗೆ ಮನೆ ನಿರ್ಮಾಣಕ್ಕೆ ನಿವೇಶನ ನೀಡಬೇಕೆಂದು ರೈತ ಸಂಘ ಹಸಿರು ಸೇನೆ ಜಿಲ್ಲಾ ಅಧ್ಯಕ್ಷರಾದ ದೊಡ್ಡಹಟ್ಡಿಯ ಪೂಜಾರಪ್ಪ ಸರ್ಕಾರ ಹಾಗೂ ತಾಪಂ ಇಒ ಅವರಿಗೆ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ತಾಲೂಕಿನ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ವಸತಿ ರಹಿತ ಬಡವರಿಗೆ ಮನೆ ನಿರ್ಮಾಣಕ್ಕೆ ನಿವೇಶನ ನೀಡಬೇಕೆಂದು ರೈತ ಸಂಘ ಹಸಿರು ಸೇನೆ ಜಿಲ್ಲಾ ಅಧ್ಯಕ್ಷರಾದ ದೊಡ್ಡಹಟ್ಡಿಯ ಪೂಜಾರಪ್ಪ ಸರ್ಕಾರ ಹಾಗೂ ತಾಪಂ ಇಒ ಅವರಿಗೆ ಒತ್ತಾಯಿಸಿದರು. ಶುಕ್ರವಾರ ತಾಲೂಕು ಪಂಚಾಯಿತಿ ಕಚೇರಿಗೆ ಭೇಟಿ ನೀಡಿದ ಪೂಜಾರಪ್ಪ ಹಾಗೂ ರೈತ ಮುಖಂಡರು, ನೂತನವಾಗಿ ತಾಪಂ ಅಧಿಕಾರ ವಹಿಸಿಕೊಂಡ ಕಾರ್ಯನಿರ್ವಹಣಾಧಿಕಾರಿ ಮಧುಸೂದನ್ ಅವರನ್ನು ಸನ್ಮಾನಿಸಿ ಮನವಿ ಪತ್ರ ಸಲ್ಲಿಸಿದರು. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸಲು ಸ್ಥಳವಿಲ್ಲದೆ ಬಾಡಿಗೆ ಹಾಗೂ ಗುಡಿಸಲುಗಳಲ್ಲಿ ವಾಸವಾಗಿದ್ದಾರೆ. ನಿವೇಶನ ರಹಿತ ಕಡುಬಡವರ ಪಟ್ಟಿ ಕೊಡುತ್ತೇವೆ. ಗ್ರಾಪಂ ವ್ಯಾಪ್ತಿಯ ಗ್ರಾಮಠಾಣಾ ಹಾಗೂ ಸರ್ಕಾರದ ಜಮೀನು ಇದ್ದ ಕೆಡೆ, ಕಂದಾಯ ಇಲಾಖೆ ಅಧಿಕಾರಿಗಳಿಂದ ಗುರ್ತಿಸಿ ನಿವೇಶನ ಮಂಜೂರು ಮಾಡಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿಕೊಂಡರು. ತಾಲೂಕಿನ ನಲಿಗನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೇ ನಂಬರ್ ನಾಲ್ಕರಲ್ಲಿ 17 ಎಕರೆ ಸರ್ಕಾರದ ಜಮೀನಿದ್ದು, ಇದರಲ್ಲಿ ಪಂಚಾಯತಿ ವ್ಯಾಪ್ತಿಗೆ ಬರುವ ವಸತಿ ರಹಿತ ಫಲಾನುಭವಿಗಳಿಗೆ ನಿವೇಶನ ಮಂಜೂರಾತಿ ಮಾಡಿಸಿಕೊಡಬೇಕು. ಇದೇ ವಿಷಯವಾಗಿ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾವಗಡಕ್ಕೆ ಅಗಮಿಸಿದ್ದ ವೇಳೆ ಮನವಿಯ ಪತ್ರ ಸಲ್ಲಿಸಲಾಗುತ್ತು. ಮಾಜಿ ಸಚಿವ ವೆಂಕಟರಮಣಪ್ಪ ಈ ಹಿಂದೆ ಇದ್ದ ಕಾರ್ಯನಿರ್ವಹಣಾಧಿಕಾರಿಗೆ ಮಂಜೂರು ಮಾಡಿಕೊಡಲು ತಿಳಿಸಿದ್ದಾದರೂ ಯಾವುದೇ ಪ್ರಯೋಜನವಾಗಿಲ್ಲ ಈಗಲಾದರೂ ಗ್ರಾಪಂ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಜತೆ ಪ್ರಸ್ತಾಪಿಸಿ ನಿವೇಶನ ಮಂಜೂರಾತಿಗೆ ಸಹಕರಿಸುವಂತೆ ಕೋರಿದರು. ಹಸಿರು ಸೇನೆ ತಾಲೂಕು ಅಧ್ಯಕ್ಷ ಶಿವು,ರಾಮಾಂಜಿ, ರಮೇಶ್, ಬಿಎಸ್ಪಿ ಮಂಜುನಾಥ್, ಗೋಪಾಲ್, ಕಡಪಲ ಕೆರೆ ಹನುಮಂತ ರಾಯಪ್ಪ ಇತರೆ ಅನೇಕ ರೈತ ಮುಖಂಡರಿದ್ದರು.