ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಅವರ ಸುರಕ್ಷತೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬುಧವಾರ ಮಾನವ ಸರಪಳಿ ರಚಿಸಲಾಯಿತು.ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಬಾಂಗ್ಲಾ ದೇಶದ ಹಿಂದೂಗಳ ಪರ ದನಿಗೂಡಿಸಲು ಪರಸ್ಪರ ಕೈ ಜೋಡಿಸಿ ‘ಬಾಂಗ್ಲಾ ದೇಶದ ಹಿಂದೂಗಳೇ, ನೀವು ಅಸಹಾಯಕರಲ್ಲ. ಜಗತ್ತಿನ ಮೂಲೆ ಮೂಲೆಯಲ್ಲಿರುವ ಹಿಂದೂಗಳು ನಿಮ್ಮೊಂದಿಗೆ ಇದ್ದಾರೆ. ಮತಾಂಧರ ಅಟ್ಟಹಾಸದ ಕೃತ್ಯಗಳಿಂದ ಧೃತಿಗೆಡದಿರಿ’ ಎಂದು ಘೋಷಣೆ ಕೂಗಿದರು.
ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಕಾರ್ಯಕರ್ತರು ಕೆಲಕಾಲ ಧರಣಿ ನಡೆಸಿ ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಅವ್ಯಾಹತವಾಗಿದೆ. ಅಲ್ಲಿನ ಹಿಂದೂ ಮಹಿಳೆಯರ ಮಾನಭಂಗ ಮಾಡಲಾಗುತ್ತಿದೆ. ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಅವರ ಉದ್ಯಮಗಳನ್ನು ನಾಶಪಡಿಸಲಾಗಿತ್ತಿದೆ. ಮತಾಂಧ ಶಕ್ತಿಗಳ ಕ್ರೌರ್ಯವನ್ನು ಇನ್ನು ಸಹಿಸಲು ಸಾಧ್ಯವಿಲ್ಲ. ಹಿಂದೂಗಳನ್ನು ಕೆಣಕಬೇಡಿ. ಇಡೀ ಹಿಂದೂಸ್ತಾನವು ಬಾಂಗ್ಲಾದ ಹಿಂದೂಗಳ ಪರ ನಿಲ್ಲಲಿದೆ ಎಂದು ಎಚ್ಚರಿಸಿದರು.
ಬಾಂಗ್ಲಾದ ಹಿಂದೂಗಳಿಗೆ ಮಾನವ ಹಕ್ಕುಗಳು ಇಲ್ಲವೇ ? ವಿಶ್ವ ಮಾನವ ಹಕ್ಕುಗಳ ಆಯೋಗ ಈಗೇನು ಮಾಡುತ್ತಿದೆ ? . ಮಾನವ ಹಕ್ಕು ಹೋರಾಟಗಾರರು ಈ ದೌರ್ಜನ್ಯದ ವಿರುದ್ಧ ಮೌನ ವಹಿಸಿರುವುದು ಏಕೆ ? ಎಂದು ಪ್ರಶ್ನಿಸಿದರು.ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಉದ್ದೇಶಪೂರ್ವಕ ಕೃತ್ಯ. ಹಿಂದೂಗಳನ್ನು ಹತ್ತಿಕ್ಕುವ ಹುನ್ನಾರವನ್ನು ಸಹಿಸಲಾಗದು. ಹಿಂದೂ ಜಗತ್ತಿನ ಯಾವುದೇ ಮೂಲೆಯಲ್ಲಿರಲಿ. ಅವರಿಗೆ ಆಪತ್ತು ಬಂದಾಗ ಸಮಸ್ತ ಹಿಂದೂಗಳು ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ನಾವು ಯಾರಿಗೂ ಅನ್ಯಾಯ ಮಾಡುವವರಲ್ಲ. ಆದರೆ ನಮಗೇ ಅನ್ಯಾಯ ಆದಾಗ ಅದನ್ನು ಹತ್ತಿಕ್ಕಲು ಯಾವ ಬೆಲೆಯನ್ನು ಬೇಕಾದರೂ ತೆರಲು ಸಿದ್ಧ. ಬಾಂಗ್ಲಾದಲ್ಲಿ ಮಾರಣ ಹೋಮ ನಿಲ್ಲಿಸುವಂತೆ ವಿಶ್ವ ಸಮುದಾಯ ಒತ್ತಡ ಹೇರಬೇಕು. ಅಲ್ಲಿ ಆದಷ್ಟು ಬೇಗ ಶಾಂತಿ ಮರುಸ್ಥಾಪನೆ ಆಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.ಬಾಂಗ್ಲಾ ದೇಶದಲ್ಲಿರುವ ಹಿಂದೂಗಳ ರಕ್ಷಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಭಾರತ ಸರ್ಕಾರ ತೆಗೆದುಕೊಳ್ಳಬೇಕು. ದಾಳಿಯಿಂದ ನಾಶಗೊಂಡಿರುವ ಹಿಂದೂ ಮನೆಗಳು ಹಾಗೂ ದೇವಾಲಯಗಳನ್ನು ಪುನರ್ ನಿರ್ಮಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ವಿಶ್ವ ಸಮುದಾಯ ಬಾಂಗ್ಲಾ ಸರ್ಕಾರಕ್ಕೆ ಆಗ್ರಹಿಸಬೇಕು ಎಂದು ಒತ್ತಾಯಿಸಿದರು.