ಅಲೆಮಾರಿಗಳಿಗೆ ಸೂರು ಕಲ್ಪಿಸಲು ಆಗ್ರಹ

| Published : Oct 28 2025, 12:33 AM IST

ಸಾರಾಂಶ

ಕಳೆದ ಅನೇಕ ವರ್ಷಗಳಿಂದ ಪಟ್ಟಣ ಸೇರಿ ಅನೇಕ ಕಡೆ ಸಣ್ಣಪುಟ್ಟ ವ್ಯಾಪಾರ, ಉದ್ಯೋಗ ಮಾಡಿಕೊಂಡು ರಸ್ತೆಬದಿಯ ಜೋಪಡಿಯಲ್ಲಿಯೇ ಹತ್ತಾರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಲಕ್ಷ್ಮೇಶ್ವರ: ಪಟ್ಟಣದ ದೊಡ್ಡೂರ ರಸ್ತೆಯಲ್ಲಿನ ಅಲೆಮಾರಿ- ಗುಡಿಸಲು ನಿವಾಸಿಗಳು ಆಶ್ರಯ, ಅಗತ್ಯ ದಾಖಲೆ, ಸೌಲಭ್ಯ ಕಲ್ಪಿಸುವಂತೆ ಸೋಮವಾರ ತಾಪಂ ನಡೆದ ಸಭೆಯ ವೇಳೆ ಶಾಸಕರಿಗೆ ಮನವಿ ಸಲ್ಲಿಸಿದರು.ಮನವಿ ಸ್ವೀಕರಿಸಿದ ಶಾಸಕ ಡಾ. ಚಂದ್ರು ಲಮಾಣಿ ಅವರು, ಕ್ಷೇತ್ರಾದ್ಯಂತ ಇರುವ ಅಲೆಮಾರಿ ಜನಾಂಗದವರಿಗೆ ಶಾಶ್ವತ ನೆಲೆ ಕಲ್ಪಿಸುವ ಮೂಲಕ ಅಲೆಮಾರಿ ಪಟ್ಟ ಕಳಚಬೇಕಿದೆ. ಅಲೆಮಾರಿಗಳೂ ನಮ್ಮೆಲ್ಲರಂತೆ ಮನುಷ್ಯರೇ. ಅವರಿಗೂ ಎಲ್ಲರಂತೆ ಬದುಕುವ ಭದ್ರತೆ, ಹಕ್ಕು, ಸೌಲಭ್ಯ ಕಲ್ಪಿಸಬೇಕು ಎಂದರು.

ಕಳೆದ ಅನೇಕ ವರ್ಷಗಳಿಂದ ಪಟ್ಟಣ ಸೇರಿ ಅನೇಕ ಕಡೆ ಸಣ್ಣಪುಟ್ಟ ವ್ಯಾಪಾರ, ಉದ್ಯೋಗ ಮಾಡಿಕೊಂಡು ರಸ್ತೆಬದಿಯ ಜೋಪಡಿಯಲ್ಲಿಯೇ ಹತ್ತಾರು ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಪೂರಕ ದಾಖಲೆ ಹೊಂದಿದ ಎಲ್ಲರಿಗೂ ಆಶ್ರಯ ಯೋಜನೆಯಡಿ ನಿವೇಶನ, ಮನೆ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ ಕಲ್ಪಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಈ ವೇಳೆ ತಹಸೀಲ್ದಾರ್ ರಾಘವೇಂದ್ರ ಕುಲಕರ್ಣಿ, ತಾಪಂ ಇಒ ಕೃಷ್ಣಪ್ಪ ಧರ್ಮರ, ರಾಮಣ್ಣ ದೊಡ್ಡಮನಿ, ಜೆ.ಎ. ಮನಿಯಾರ, ಅಲೆಮಾರಿ ನಿವಾಸಿಗಳಾದ ಅಣ್ಣಪ್ಪ ಶಿರಹಟ್ಟಿ, ಕಲ್ಲಪ್ಪ ರಾಣೇಬೆನ್ನೂರ ಸೇರಿದಂತೆ ಇತರರು ಇದ್ದರು.ಒತ್ತುವರಿಯಾದ ಜಾಗ ತೆರವಿಗೆ ಮನವಿ

ಲಕ್ಷ್ಮೇಶ್ವರ: ಪಟ್ಟಣದ ಬಸ್ತಿಬಣದ ಉಮಚಗಿ ಓಣಿಯಲ್ಲಿನ ಗೌರಿಗುಡಿಯ ಸುತ್ತಲಿನ ಸರ್ಕಾರದ ಜಾಗ, ರಸ್ತೆ ಒತ್ತುವರಿಯಾಗಿದ್ದು, ಪುರಸಭೆಯವರು ತೆರವುಗೊಳಿಸಿ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ನಿವಾಸಿಗಳು ಸೋಮವಾರ ಪುರಸಭೆಗೆ ಮನವಿ ಸಲ್ಲಿಸಿದರು.ಮನವಿ ಪತ್ರದಲ್ಲಿ ಗೌರಿ ಗುಡಿಯ ಸುತ್ತಲಿನ ಸರ್ಕಾರಿ ಜಾಗ, ರಸ್ತೆಯನ್ನು ಕೆಲವರು ಒತ್ತುವರಿ ಮಾಡಿಕೊಂಡು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಸುತ್ತಮುತ್ತಲಿನ ಜನರ ಧಾರ್ಮಿಕ, ಸಾಮಾಜಿಕ ಮತ್ತು ಸಾಮೂಹಿಕ ಬಳಕೆಗೆ, ಸಂಚಾರಕ್ಕೆ ತೊಂದರೆಯಾಗಿದೆ. ಒತ್ತುವರಿ ತೆರವು ವಿಚಾರದಲ್ಲಿ ನೆರೆಹೊರೆಯವರೊಂದಿಗೆ ನಿತ್ಯ ಮನಸ್ತಾಪ, ಕಿರಿಕಿರಿ ಉಂಟಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಮಕ್ಷಮ ಬಂದು ಪರಿಶೀಲಿಸಿ ಅಳತೆ ಮಾಡಿ ಒತ್ತುವರಿ ತೆರವು ಮಾಡಿಸಬೇಕು ಎಂದು ಮನವಿ ಸಲ್ಲಿಸಿದರು.ಈ ವೇಳೆ ಮಹಿಳೆಯರಾದ ಗಿರಿಜವ್ವ ಉಮಚಗಿ, ಸೋಮವ್ವ ಅಣ್ಣಿಗೇರಿ, ಅಕ್ಕಮ್ಮ ಶಿರೋಳ, ಸವಿತಾ ಇಟ್ಟಿಗೇರಿ, ಗಂಗಮ್ಮ ಬೊಮ್ಮನಹಳ್ಳಿ ಸೇರಿ ಓಣಿಯ ಮಹಿಳೆಯರು, ಮುಖಂಡರು ಇದ್ದರು. ಪುರಸಭೆ ಅಧಿಕಾರಿ ಮಂಜುಳಾ ಹೂಗಾರ ಮನವಿ ಸ್ವೀಕರಿಸಿದರು.