ಸಾರಾಂಶ
ಅಜ್ಜಂಪುರ, 2000-2001 ನೇ ಸಾಲಿನ ನಿವೇಶನಗಳ ಹಂಚಿಕೆಯಲ್ಲಾದ ಲೋಪದೋಷ ಸರಿಪಡಿಸಿ, ಮೂಲ ಫಲಾನುಭವಿಗಳಿಗೆ ನಿವೇಶನ ವಿತರಿಸಬೇಕು ಎಂದು ತಾಲೂಕಿನ ಮುಗಳಿ ಗ್ರಾಮದ ನಿವೇಶನ ವಂಚಿತರು ಒತ್ತಾಯಿಸಿದ್ದಾರೆ.
ನ್ಯಾಯ ಸಿಗದಿದ್ದರೆ ಪಂಚಾಯತಿ ಆವರಣದಲ್ಲಿ ಧರಣಿ: ಎಚ್ಚರಿಕೆ
ಕನ್ನಡಪ್ರಭ ವಾರ್ತೆ, ಅಜ್ಜಂಪುರ2000-2001 ನೇ ಸಾಲಿನ ನಿವೇಶನಗಳ ಹಂಚಿಕೆಯಲ್ಲಾದ ಲೋಪದೋಷ ಸರಿಪಡಿಸಿ, ಮೂಲ ಫಲಾನುಭವಿಗಳಿಗೆ ನಿವೇಶನ ವಿತರಿಸಬೇಕು ಎಂದು ತಾಲೂಕಿನ ಮುಗಳಿ ಗ್ರಾಮದ ನಿವೇಶನ ವಂಚಿತರು ಒತ್ತಾಯಿಸಿದ್ದಾರೆ. ಗ್ರಾಮದ ಸರ್ವೆ ನಂ 2ಪಿ 1 ರಲ್ಲಿ 2.32 ಎಕರೆಯಲ್ಲಿ ನಿವೇಶನಕ್ಕೆ ಅರ್ಜಿಸಲ್ಲಿಸಿದ್ದ 85 ಮಂದಿಗೆ 30*37 ವಿಸ್ತೀರ್ಣದ ನಿವೇಶನ ಹಂಚಿಕೆ ಮಾಡಲಾಗಿತ್ತು. ಆದರೆ ಈ ನಿವೇಶನ ಹಂಚಿಕೆ ಮತ್ತು ಹಕ್ಕು ಪತ್ರ ನೀಡಿಕೆಯಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿದ್ದಾರೆ.ಫಲಾನುಭವಿಗಳ ಮೂಲ ಪಟ್ಟಿಯ 10 ಮಂದಿಯನ್ನು ಕೈಬಿಟ್ಟು, ಅನ್ಯರಿಗೆ (ಗ್ರಾಮಸ್ಥರೇ ಅಲ್ಲದವರಿಗೂ) ನಿವೇಶನ ಹಕ್ಕು ಪತ್ರ ವಿತರಿಸಲಾಗಿದೆ. ಕಾನೂನು ಬಾಹಿರವಾಗಿ ನಿವೇಶನ ಪಡೆದಿರುವವರು ಈಗಾಗಲೇ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಮೂಲ ಫಲಾನುಭವಿಗಳ ಪಟ್ಟಿಯ ಕ್ರ.ಸಂ 53 ರಲ್ಲಿ ನನ್ನ ಹೆಸರಿತ್ತು. ನನಗೆ ಆಶ್ರಯ ನಿವೇಶನದ 53ನೇ ನಂಬರಿನ ನಿವೇಶನದ ಹಕ್ಕುಪತ್ರ ನೀಡಬೇಕಿತ್ತು. ಅದೇ ಕ್ರಮಸಂಖ್ಯೆ ನಿವೇಶನವನ್ನು ಮೂಲ ಫಲಾನುಭವಿ ಪಟ್ಟಿಯಲ್ಲಿಯೇ ಇಲ್ಲದ ದೇವಿರಮ್ಮ ಕೃಷ್ಣಮೂರ್ತಿ ಎನ್ನುವರಿಗೆ ವಿತರಿಸಲಾಗಿದೆ. ಇದರಿಂದ ನಮಗೆ ಅನ್ಯಾಯವಾಗಿದೆ ಎಂದು ಸೌಬಾಗ್ಯ ಕೋಂ ಮಹೇಶ್ವರಪ್ಪ ಹೇಳಿದರು. ಮೂಲ ಪಟ್ಟಿಯಲ್ಲಿ ಇಲ್ಲದೇ, ಅಕ್ರಮವಾಗಿ ನಿವೇಶನ ಪಡೆದವರಿಂದ ತಕ್ಷಣ ನಿವೇಶನ ಹಿಂಪಡೆಯಬೇಕು. ಪಂಚಾಯಿತಿ ಜನಪ್ರತಿನಿಧಿಗಳು, ಪಿಡಿಒ ನಿವೇಶನ ಹಂಚಿಕೆಯಲ್ಲಿ ಆದ ಅಕ್ರಮವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು. ನಮಗೆ ಆಗಿರುವ ಅನ್ಯಾಯ ಸರಿಪಡಿಸಿ, ನಿವೇಶನ ಹಕ್ಕುಪತ್ರ ನೀಡಿ, ನಮ್ಮ ಹೆಸರಿಗೆ ಖಾತೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ನಮಗೆ ನ್ಯಾಯ ಸಿಗದಿದ್ದರೆ ಪಂಚಾಯತಿ ಆವರಣದಲ್ಲಿ ಧರಣಿ ನಡೆಸುವುದಾಗಿ ನಿವೇಶನ ವಂಚಿತರು ಎಚ್ಚರಿಸಿದರು. ಫಲಾನುಭವಿಗಳಿಗೆ ಮಾತ್ರ ನಿವೇಶನ: ಫಲಾನುಭವಿ ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ನಿವೇಶನ ಹಕ್ಕುಪತ್ರ ವಿತರಣೆಯಾಗಿದೆ. ನಿವೇಶನ ಖಾತೆ ಮಾಡಿಕೊಡಲಾಗಿದೆ ಎಂಬ ದೂರಿನ ಹಿನ್ನೆಲೆ ಮೇ ತಿಂಗಳ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ, ಫಲಾನುಭವಿ ಪಟ್ಟಿಯಲ್ಲಿರುವವರಿಗೆ ಮಾತ್ರ ಆಶ್ರಯ ನಿವೇಶನ ಕೊಡಬೇಕು ಎಂದು ತಿರ್ಮಾನಿಸಿ, ಅನುಮೋದಿಸ ಲಾಗಿದೆ ಎಂದು ಪಂಚಾಯಿತಿ ಅಧ್ಯಕ್ಷ ದೇವರಾಜ್ ತಿಳಿಸಿದರು.