ತುಂಗಭದ್ರಾ ಡ್ಯಾಂನಿಂದ ಬೇಸಿಗೆ ಬೆಳೆಗೆ ನೀರು ಬಿಡಲು ಒತ್ತಾಯ

| Published : Oct 10 2025, 01:01 AM IST

ತುಂಗಭದ್ರಾ ಡ್ಯಾಂನಿಂದ ಬೇಸಿಗೆ ಬೆಳೆಗೆ ನೀರು ಬಿಡಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್‌ಎಲ್‌ಸಿ ಮತ್ತು ಎಚ್‌ಎಲ್‌ಸಿ ಕಾಲುವೆಗಳಲ್ಲಿ ಜನವರಿ ಅಂತ್ಯದವರೆಗೂ ನೀರು ಹರಿಸಿದರೂ ಜಲಾಶಯದಲ್ಲಿ ಸುಮಾರು 40 ಟಿಎಂಸಿಗಳಷ್ಟು ನೀರು ಉಳಿಯುತ್ತದೆ.

ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿನ ಬೆಳೆಗೆ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿ ತುಂಗಭದ್ರಾ ರೈತ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಹಳ್ಳಿಗಳ ರೈತರು ಶಾಸಕ ಜೆ.ಎನ್. ಗಣೇಶ್ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.ಸಂಘದ ಅಧ್ಯಕ್ಷ ಡಾ. ಪುರುಷೋತ್ತಮ ಗೌಡ ಮಾತನಾಡಿ, 2025ರ ಜೂನ್ 27ರಂದು ನಡೆದ ಐಸಿಸಿ ಸಭೆಯಲ್ಲಿ ಹಿಂಗಾರು ಬೆಳೆಗಳಿಗೆ ನೀರು ಬಿಡುಗಡೆ ಕುರಿತು ಚರ್ಚೆ ನಡೆಯಿತು. ಅಂದಿನ ಸಭೆಯಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ನೀರಾವರಿ ತಜ್ಞರು ಭಾಗವಹಿಸಿ, ತುಂಗಭದ್ರಾ ಜಲಾಶಯದ ಗೇಟುಗಳ ಅಳವಡಿಕೆ ಮತ್ತು ಬೇಸಿಗೆ ಬೆಳೆಗಳಿಗೆ ನೀರು ಒದಗಿಸುವ ಕುರಿತು ನಿರ್ಣಯ ತೆಗೆದುಕೊಳ್ಳುವ ವಿಷಯ ಮುಂದೂಡಲಾಗಿತ್ತು. ಆದರೆ ಇಂದಿಗೂ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಎಲ್‌ಎಲ್‌ಸಿ ಮತ್ತು ಎಚ್‌ಎಲ್‌ಸಿ ಕಾಲುವೆಗಳಲ್ಲಿ ಜನವರಿ ಅಂತ್ಯದವರೆಗೂ ನೀರು ಹರಿಸಿದರೂ ಜಲಾಶಯದಲ್ಲಿ ಸುಮಾರು 40 ಟಿಎಂಸಿಗಳಷ್ಟು ನೀರು ಉಳಿಯುತ್ತದೆ. ಈ ಪ್ರಮಾಣದ ನೀರು ಗೇಟು ಅಳವಡಿಕೆಗೆ ಯಾವುದೇ ಅಡಚಣೆಯಾಗುವುದಿಲ್ಲ. ಫೆಬ್ರವರಿಯಿಂದ ಜುಲೈವರೆಗೆ ಆರು ತಿಂಗಳ ಅವಧಿಯಲ್ಲಿ ಗೇಟು ಅಳವಡಿಕೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು. ಈ ನಡುವೆ ರೈತರು ಬೇಸಿಗೆ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಬಲದಂಡೆ, ಎಡದಂಡೆ ಕಾಲುವೆಗಳ ಮೂಲಕ ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ರೈತರಿಗೆ ಕುಡಿಯುವ ನೀರು ಒದಗಿಸಲು ಸರ್ಕಾರ ಬದ್ಧವಾಗಿದೆ. ಅದೇ ಸಮಯದಲ್ಲಿ ಬೇಸಿಗೆ ಬೆಳೆಗೆ ನೀರು ದೊರೆಯದಿದ್ದರೆ ರೈತರ ಆರ್ಥಿಕ ಸ್ಥಿತಿ ಸಂಕಷ್ಟಕ್ಕೀಡಾಗಲಿದೆ. ಆದ್ದರಿಂದ ಸಿಎಂ ಮತ್ತು ಡಿಸಿಎಂ ತಕ್ಷಣ ಐಸಿಸಿ ಸಭೆ ಕರೆಯುವಂತೆ ಹಾಗೂ ರೈತರ ಹಿತಾಸಕ್ತಿಗಾಗಿ ಬೇಸಿಗೆ ಹಂಗಾಮಿನ ನೀರು ಬಿಡುವಂತೆ ಶಾಸಕ ಜೆ.ಎನ್. ಗಣೇಶ್ ಒತ್ತಾಯಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರೈತ ಸಂಘದ ಪ್ರಮುಖರಾದ ಕೊನೇರು ಶ್ರೀರಾಮಕೃಷ್ಣ, ಪೋಲೂರು ಸತ್ಯನಾರಾಯಣ, ಪಿ. ಮೂಕಯ್ಯಸ್ವಾಮಿ, ಕೆ.ಶ್ರೀನಿವಾಸರಾವ್, ದರೂರು ವೀರಭದ್ರನಾಯಕ, ಮುಷ್ಟಗಟ್ಟಿ ಭೀಮನಗೌಡ, ಗೆಣಕಿಹಾಳ್ ಶರಣನಗೌಡ, ಎಮ್ಮಿಗನೂರು ರಾಜಾಸಾಬ್, ಚನ್ನಪಟ್ಟಣ ಮಂಜುಗೌಡ, ಖಾಜಾವಲಿ, ಹಂಪಾದೇವನಹಳ್ಳಿ ರಾಜಶೇಖರಗೌಡ ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.