ಮಲಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡುವಂತೆ ಆಗ್ರಹ

| Published : Jul 17 2025, 12:39 AM IST

ಸಾರಾಂಶ

ನವೀಲುತೀರ್ಥ ಜಲಾಶಯದಿಂದ ಮಲಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡುವಂತೆ ಒತ್ತಾಯ

ಕನ್ನಡಪ್ರಭ ವಾರ್ತೆ ರಾಮದುರ್ಗ

ರಾಮದುರ್ಗ ಹಾಗೂ ಬಾದಾಮಿ ತಾಲೂಕಿನಲ್ಲಿ ಮಳೆಯಾಗದೆ ಜನಜಾನುವಾರುಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ನವೀಲುತೀರ್ಥ ಜಲಾಶಯದಿಂದ ಮಲಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ಎರಡು ತಾಲೂಕಿನ ರೈತರು, ಜಲಾಶಯದ ಅಧೀಕ್ಷಕ ಎಂಜಿನಿಯರ್‌ ಮುಖಾಂತರ ಜಲಾಶಯದ ಆಡಳಿತ ಮಂಡಳಿ ಅಧ್ಯಕ್ಷೆ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರಗೆ ಮನವಿ ಸಲ್ಲಿಸಿದರು.

ಮುನವಳ್ಳಿಯ ಅಧೀಕ್ಷಕ ಎಂಜಿನಿಯರ್‌ ಕಾರ್ಯಾಲಯಕ್ಕೆ ತೆರಳಿ ರೈತರು ಮನವಿ ಸಲ್ಲಿಸಿದರು. ರಾಜ್ಯದ ಬೇರೆಡೆ ಮಳೆಯಾಗಿದೆ. ಮಲಪ್ರಭಾ ಎಡದಂಡೆ ಕಾಲುವೆ ವಾಪ್ತಿಯ ರಾಮದುರ್ಗ ಮತ್ತು ಬಾದಾಮಿ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದೆ ಜನಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ರೈತರು ಮಳೆಯನ್ನು ನಂಬಿ ಮೆಕ್ಕೆಜೋಳ, ಹತ್ತಿ, ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳ ಬೀಜ ಬಿತ್ತನೆ ಮಾಡಿದ್ದಾರೆ. ಮಳೆಯಾಗದೇ ಬಿತ್ತಿದ ಬೆಳೆಗಳು ಮೊಳಕೆಯೊಡೆದು ಒಣಗುವ ಹಂತದಲ್ಲಿವೆ ಎಂದು ದೂರಿದ್ದಾರೆ.

ಕಳೆದ ವರ್ಷ ಜುಲೈ ಮೊದಲ ವಾರದಲ್ಲಿಯೇ ಮಲಪ್ರಭಾನದಿಗೆ ನೀರು ಹರಿಸಲಾಗಿತ್ತು. ಆದರೆ ಈ ಬಾರಿ ಇನ್ನೂ ನೀರು ಬಿಟ್ಟಿಲ್ಲ. ರಾಮದುರ್ಗ ಶಾಸಕ ಅಶೋಕ ಪಟ್ಟಣ, ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ, ಸಚಿವ ಆರ್.ಬಿ.ತಿಮ್ಮಾಪೂರ ಮುಖಾಂತರ ಜಲಾಶಯದ ಅಧಿಕಾರಿಗಳಿಗೆ ನೀರು ಬಿಡುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಸಾಕಷ್ಟು ಬಾರಿ ನದಿಗೆ ನೀರು ಹರಿಸುವಂತೆ ರೈತರು ಮನವಿ ಮಾಡಿದರೂ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಸ್ಪಂದಿಸಿಲ್ಲ. ಶೀಘ್ರದಲ್ಲಿ ನೀರು ಬಿಡದೇ ಹೋದಲ್ಲಿ ಬಿತ್ತಿದ ಬೆಳೆಗಳು ನಾಶವಾಗುತ್ತಿವೆ. ಬೆಳೆಗಳು ನಾಶವಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗುವ ಮೊದಲು ನೀರು ಬಿಟ್ಟಲ್ಲಿ ಉಪಯೋಗವಾಗಲಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟವರು ಕಾಲುವೆಗೆ ಶೀಘ್ರ ನೀರು ಹರಿಸಲು ಕ್ರಮ ತೆಗೆದಕೊಳ್ಳಬೇಕು. ಇಲ್ಲವಾದಲ್ಲಿ ರೈತರು ಜಲಾಶಯದ ಕಾರ್ಯಾಲಯದ ಎದುರು ಉಗ್ರ ಹೋರಾಟ ಕೈಗೊಂಡು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ರೈತ ಮುಖಂಡರಾದ ಎಸ್.ಎಂ.ಶಿವನಗೌಡ್ರ, ಎಚ್.ಬಿ.ಪಾಟೀಲ, ಎಸ್.ಎಂ.ಕುಲಕರ್ಣಿ, ಚಂದಪ್ಪ ಹಿರಲವರ, ಬಾಳುಸಾಬ ನದಾಫ, ಪ್ರಕಾಶ ಮಾದರ, ಶಂಕ್ರೆಪ್ಪ ಜಗದವರ, ಸಂಗಪ್ಪ ಹಣ್ಣಿನ, ಮಂಜಪ್ಪ ಮುಷ್ಠಿಗೇರಿ, ಭೀಮಪ್ಪ ಹಿರಲವರ, ಮರಿಗೌಡ ದೇಸಾಯಿಗೌಡ್ರ ಸೇರಿ ಇತರರು ಇದ್ದರು.