ಹಿಂಗಾರು ಹಂಗಾಮಿನಲ್ಲಿ ವಾಣಿಜ್ಯ ಬೆಳೆಗಳಾದ ಗೋದಿ, ಜೋಳ, ಸೂರ್ಯಕಾಂತಿ, ಗೋವಿನಜೋಳ ಬಿತ್ತನೆ ಮಾಡಿದ್ದಾರೆ. ಕನಿಷ್ಠ ಎರಡ್ಮೂರು ಬಾರಿ ನೀರು ನೀಡಿದರೆ ಮಾತ್ರ ಬೆಳೆಗಳು ರೈತನ ಕೈ ಹಿಡಿಯುತ್ತವೆ.

ನರಗುಂದ: ಪ್ರಸಕ್ತ ವರ್ಷ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ಎರಡರಿಂದ ಮೂರು ಬಾರಿ ನೀರು ಬೇಕಾಗುತ್ತದೆ. ಆದ್ದರಿಂದ ಮಲಪ್ರಭಾ ಜಲಾಶಯದಿಂದ ಕಾಲುವೆಗೆ ಮಾ. 15ರ ವರೆಗೆ ನೀರು ಪೂರೈಕೆ ಮಾಡಬೇಕೆಂದು ರೈತರು ಆಗ್ರಹಿಸಿದರು.

ಸೋಮವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಹಸೀಲ್ದಾರರಿಗೆ ಮನವಿ ನೀಡಿ ರೈತರು ಮಾತನಾಡಿ, 2025- 26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿವಿಧ ವಾಣಿಜ್ಯ ಬೆಳೆಗಳನ್ನು ಬಿತ್ತನೆ ಮಾಡಿ ಉತ್ತಮ ಬೆಳೆ ಬೆಳೆಸಿದ್ದರು. ಆದರೆ ಬೆಳೆಗಳು ಕಟಾವಿಗೆ ಬಂದ ಸಂದರ್ಭದಲ್ಲಿ ಅತಿವೃಷ್ಟಿಯಾಗಿ ಬೆಳೆಗಳು ಜಮೀನಿನಲ್ಲಿ ಕೊಳೆತವು. ಇದರಿಂದ ತಾಲೂಕಿನ ರೈತರು ತೀವ್ರ ತೊಂದರಗೆ ಸಿಲುಕಿದರು ಎಂದರು.

ಹಿಂಗಾರು ಹಂಗಾಮಿನಲ್ಲಿ ವಾಣಿಜ್ಯ ಬೆಳೆಗಳಾದ ಗೋದಿ, ಜೋಳ, ಸೂರ್ಯಕಾಂತಿ, ಗೋವಿನಜೋಳ ಬಿತ್ತನೆ ಮಾಡಿದ್ದಾರೆ. ಕನಿಷ್ಠ ಎರಡ್ಮೂರು ಬಾರಿ ನೀರು ನೀಡಿದರೆ ಮಾತ್ರ ಬೆಳೆಗಳು ರೈತನ ಕೈ ಹಿಡಿಯುತ್ತವೆ. ಆದರೆ ನವೀಲುತೀರ್ಥ ನೀರು ಬಳಕೆದಾರರ ಸಂಘದವರು ಯಾವುದೇ ರೈತರ ಅಭಿಪ್ರಾಯ ಪಡೆಯದೆ ಫೆ. 15ಕ್ಕೆ ಕಾಲುವೆ ನೀರು ಬಂದ್ ಮಾಡಲಾಗುವುದೆಂದು ಹೇಳಿದ್ದು ಖಂಡನೀಯ ಎಂದರು.

ಪ್ರಸಕ್ತ ವರ್ಷ ಮಲಪ್ರಭಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಮಾರ್ಚ ತಿಂಗಳವರೆಗೆ ಕಾಲುವೆಗಳಿಗೆ ನೀರು ಪೂರೈಕೆ ಮಾಡಿದರೂ ಮುಂದಿನ ದಿನಗಳಲ್ಲಿ ನಾಲ್ಕು ಜಿಲ್ಲೆಯ ಹನ್ನೊಂದು ತಾಲೂಕಗಳಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದ್ದರಿಂದ ಸರ್ಕಾರ ಮಾರ್ಚ್ ತಿಂಗಳವರೆಗೆ ಮಲಪ್ರಭಾ ಬಲದಂಡೆ ಕಾಲುವೆಗೆ ನೀರು ಪೂರೈಕೆ ಮಾಡಬೇಕು. ಒಂದು ವೇಳೆ ಫೆ. 15ಕ್ಕೆ ಕಾಲುವೆ ನೀರು ಬಂದ್ ಮಾಡಿದರೆ ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಸಿದರು.

ತಹಸೀಲ್ದಾರ್ ಶ್ರೀಶೈಲ ತಳವಾರ ರೈತರ ಮನವಿ ಸ್ವೀಕರಿಸಿ ಮೇಲಧಿಕಾರಿಗಳಗೆ ರವಾನೆ ಮಾಡಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಬಸಯ್ಯ ಹೊರಗಿನಮಠ, ತಾಲೂಕಿನ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಉಮೇಶ ಮರ್ಚಪ್ಪನವರ, ಶಂಕರಗೌಡ ಶಿರಿಯಪ್ಪಗೌಡ್ರ, ಈರಣ್ಣ ಹುರಕಡ್ಲಿ, ಪ್ರವೀಣ ಯಲಿಗಾರ, ಪರಪ್ಪ ಸಹಕಾರ, ಸತೀಶ ಕರಿಯಪ್ಪನವರ, ಮೌನೇಶ ಯಲ್ಲಪ್ಪಗೌಡ್ರ, ಶಿವನಗೌಡ ಕಲ್ಲನಗೌಡ್ರ, ಶಿವಪ್ಪ ವಾಲಿ, ಸಂದೀಪ ಯಲ್ಲಪ್ಪಗೌಡ್ರ, ವೆಂಕಣ್ಣ ವಾಸನ, ಆನಂದ ಹಿರೇಹನುಮಂತಗೌಡ್ರ, ವೆಂಕಣ್ಣ ಹೊರಕೇರಿ, ಹನುಮಂತಗೌಡ್ರ, ಬಾಪುಗೌಡ ವಾಸನ, ಡಿ.ಟಿ. ಪಾಟೀಲ, ಅಣ್ಣಪ್ಪಗೌಡ ಪಾಟೀಲ ಮುಂತಾದವರು ಇದ್ದರು.