ಕೆರೆ ಸುತ್ತ ಬೆಳೆದ ಜಾಲಿ ಗಿಡಗಳ ತೆರವಿಗೆ ಒತ್ತಾಯ

| Published : Oct 11 2025, 12:03 AM IST

ಕೆರೆ ಸುತ್ತ ಬೆಳೆದ ಜಾಲಿ ಗಿಡಗಳ ತೆರವಿಗೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ವಾಡಿಕೆಗಿಂತಲೂ ಅಧಿಕ ಪ್ರಮಾಣದ ಮಳೆ ಸುರಿದಿದ್ದು, ಕೆರೆ ಕೋಡಿ ಬಿದ್ದಿದೆ. ಕೆರೆ ಸುತ್ತಲೂ ಇರುವ ರೈತರ ಹೊಲಗಳಿಗೆ ನೀರು ಹರಿದು ಬರುತ್ತಿದ್ದು, ರೈತರ ಜಮೀನುಗಳು ಜವಳು ಬೀಳುತ್ತಿವೆ.

ಶಿರಹಟ್ಟಿ: ತಾಲೂಕಿನ ಮಜ್ಜೂರ ಗ್ರಾಮದಲ್ಲಿರುವ ಕೆರೆ ೮೭.೨೭ ಚ.ಕಿ.ಮೀ. ಕೆರೆಯ ಜಲಾನಯನ ಪ್ರದೇಶವಾಗಿದ್ದು, ೭೨೦.೫೨ ಹೆಕ್ಟೇರ್ ಕ್ಷೇತ್ರಕ್ಕೆ ನೀರು ಸರಬರಾಜಾಗುತ್ತಿದ್ದು, ೯.೯೦ ಕಿಮೀ ಕಾಲುವೆ ಇದ್ದು, ಸಧ್ಯ ಕೆರೆ ಸುತ್ತ ಮುತ್ತ ಜಾಲಿ ಕಂಟಿ ಬೆಳೆದು ರೈತರು ತಮ್ಮ ಹೊಲಕ್ಕೆ ಹೋಗದಂತ ಸ್ಥಿತಿ ನಿರ್ಮಾಣವಾಗಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ರೈತರಿಗೆ ಆಗುತ್ತಿರುವ ತೊಂದರೆ ಸರಿಪಡಿಸಬೇಕು ಎಂದು ಮುಖಂಡ ಶಿವನಗೌಡ ಪಾಟೀಲ ತಹಸೀಲ್ದಾರರಿಗೆ ಮನವಿ ಮಾಡಿದರು.ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಅವರು ಮಜ್ಜೂರ ಕೆರೆಗೆ ಬೇಟಿ ನೀಡಿದ ವೇಳೆ ಗ್ರಾಮದ ರೈತರೆಲ್ಲರೂ ಸೇರಿ ಮನವಿ ಮಾಡಿ ಮಾತನಾಡಿದರು. ಈ ಬಾರಿ ವಾಡಿಕೆಗಿಂತಲೂ ಅಧಿಕ ಪ್ರಮಾಣದ ಮಳೆ ಸುರಿದಿದ್ದು, ಕೆರೆ ಕೋಡಿ ಬಿದ್ದಿದೆ. ಕೆರೆ ಸುತ್ತಲೂ ಇರುವ ರೈತರ ಹೊಲಗಳಿಗೆ ನೀರು ಹರಿದು ಬರುತ್ತಿದ್ದು, ರೈತರ ಜಮೀನುಗಳು ಜವಳು ಬೀಳುತ್ತಿವೆ. ಆದಷ್ಟು ಬೇಗ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿಕೊಂಡರು. ಮಜ್ಜೂರ ಕೆರೆ ಕಾಲುವೆಗಳು ಕೂಡ ಹೂತು ಹೋಗಿವೆ. ಬೇಸಿಗೆ ಕಾಲದಲ್ಲಿ ರೈತರ ಜಮೀನುಗಳಿಗೆ ನೀರು ಹರಿಸಿ ರೈತರ ನೆರವಿಗೆ ಧಾವಿಸಬೇಕಾದ ಅಧಿಕಾರಿಗಳು ಇದನ್ನು ಗಮನಿಸದೇ ಇರುವುದು ಆತಂಕ ಪಡುವಂತಾಗಿದೆ. ಮಜ್ಜೂರ, ಮಾಚೇನಹಳ್ಳಿ, ತೆಗ್ಗಿನ ಭಾವನೂರ, ಕುಸಲಾಪುರ ಗ್ರಾಮಗಳ ಸಾವಿರಾರು ಜನ ರೈತರ ಜಮೀನುಗಳು ಬೇಸಿಗೆ ಕಾಲದಲ್ಲಿ ಈ ಕೆರೆ ನೀರನ್ನೇ ಅವಲಂಬಿಸಿದ್ದು, ಕ್ರಮ ಕೈಗೊಳ್ಳಬೇಕು ಎಂದರು.ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಮಾತನಾಡಿ, ಕೆರೆ ಅಕ್ಕಪಕ್ಕ ರೈತರ ಜಮೀನುಗಳಿಗೆ ತೆರಳುವ ಮಾರ್ಗವಾಗಿ ಬೆಳೆದಿರುವ ಜಾಲಿ ಕಂಟಿ ತೆಗೆಸಲು ಮತ್ತು ಕೆರೆ ದಾರಿ ದುರಸ್ತಿಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಬೇಗನೆ ಈ ಕೆಲಸ ಆಗಲಿದೆ. ರೈತರ ಏನೇ ಸಮಸ್ಯೆ ಇದ್ದರೂ ಅಧಿಕಾರಿಗಳು ಸ್ಪಂದಿಸಿ ಕೆಲಸ ಮಾಡಿಕೊಡುವಂತೆ ಸೂಚನೆ ನೀಡಲಾಗಿದೆ ಎಂದರು.

ಮಜ್ಜೂರ ಗ್ರಾಮದಿಂದ ಜಲ್ಲಿಗೇರಿ ಗ್ರಾಮಕ್ಕೆ ತೆರಳುವ ರಸ್ತೆ ಹದಗೆಟ್ಟ ಬಗ್ಗೆ ಪರಿಶೀಲನೆ ಮಾಡಿದರು. ದುರಸ್ತಿ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡಿ ಸರಿಪಡಿಸಲು ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಕಂದಾಯ ನಿರೀಕ್ಷಕ ಬಸವರಾಜ ಕಾತ್ರಾಳ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಸಾರ್ವಜನಿಕರು ಈ ವೇಳೆ ಇದ್ದರು.