ಮಠ-ಮಂದಿರ, ರೈತರ ಜಮೀನಿನ ವಕ್ಫ್‌ ಹೆಸರು ತೆಗೆದುಹಾಕಲು ಆಗ್ರಹ

| Published : Nov 17 2024, 01:17 AM IST

ಮಠ-ಮಂದಿರ, ರೈತರ ಜಮೀನಿನ ವಕ್ಫ್‌ ಹೆಸರು ತೆಗೆದುಹಾಕಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ದೇವಸ್ಥಾನಗಳು, ಮಠ-ಮಾನ್ಯಗಳು ಹಾಗೂ ರೈತರ ಪಹಣಿಯಲ್ಲಿ ವಕ್ಫ್‌ ಎಂದು ನಮೂದಾಗುತ್ತಿವೆ. ಇದರಿಂದ ಅನ್ನದಾತರು ತೀವ್ರ ಆತಂಕದಲ್ಲಿದ್ದಾರೆ.

ಬಳ್ಳಾರಿ: ನಾಡಿನ ಮಠ-ಮಂದಿರ-ದೇವಸ್ಥಾನಗಳು ಹಾಗೂ ಬಡ ರೈತರ ಪಹಣಿಯಲ್ಲಿ ನಮೂದಾಗಿರುವ ವಕ್ಫ್‌ ಹೆಸರನ್ನು ಕೂಡಲೇ ತೆಗೆದು ಹಾಕಬೇಕು ಎಂದು ಬಳ್ಳಾರಿ-ವಿಜಯನಗರ ಜಿಲ್ಲಾ ಮಠಾಧೀಶರ ಧರ್ಮ ಪರಿಷತ್‌ ಆಗ್ರಹಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಎರಡು ಜಿಲ್ಲೆಗಳ ಮಠಾಧೀಶರು, ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರಲ್ಲದೆ, ಸರ್ಕಾರ ಧೋರಣೆಯ ಬಗ್ಗೆ ಸಾರ್ವಜನಿಕರು ಛೀ-ಥೂ ಎನ್ನುತ್ತಿದ್ದಾರೆ. ಆದರೂ ಈ ಸರ್ಕಾರಕ್ಕೆ ಬುದ್ಧಿ ಬರುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಶ್ರೀ ಬಸವಲಿಂಗಸ್ವಾಮಿ ಮಾತನಾಡಿ, ರಾಜ್ಯದ ದೇವಸ್ಥಾನಗಳು, ಮಠ-ಮಾನ್ಯಗಳು ಹಾಗೂ ರೈತರ ಪಹಣಿಯಲ್ಲಿ ವಕ್ಫ್‌ ಎಂದು ನಮೂದಾಗುತ್ತಿವೆ. ಇದರಿಂದ ಅನ್ನದಾತರು ತೀವ್ರ ಆತಂಕದಲ್ಲಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಈ ರೀತಿಯ ವಕ್ಫ್‌ ಬೋರ್ಡ್‌ಗೆ ಆಸ್ತಿ ವರ್ಗಾವಣೆಯಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ವಕ್ಫ್‌ ಬೋರ್ಡ್ ಸಂವಿಧಾನದ ಆಶಯದಂತೆ ರಚನೆಯಾಗಿಲ್ಲ. ವಕ್ಫ್ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾದರೆ ಸಾಮಾನ್ಯ ಜನರ ಪರಿಸ್ಥಿತಿ ಏನು? ಸಣ್ಣಪುಟ್ಟ ರೈತರ ಹೆಸರಿನ ಪಹಣಿಯಲ್ಲೂ ವಕ್ಫ್‌ ಎಂದು ಬದಲಾಗಿದ್ದು, ರೈತ ಕುಟುಂಬಗಳು ಏನು ಮಾಡಬೇಕು? ಅವರ ಆತಂಕ ನಿವಾರಣೆ ಹೇಗೆ ಎಂದು ಪ್ರಶ್ನಿಸಿದರು.

ನಾಡಿನ ಮಠ-ಮಾನ್ಯಗಳು ಸ್ವಾತಂತ್ರ್ಯ ಪೂರ್ವದಿಂದಲೂ ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆ ಸಲ್ಲಿಸುತ್ತಾ ಬಂದಿವೆ. ನರೇಗಲ್‌ನಲ್ಲಿನ ಕೊಟ್ಟೂರುಸ್ವಾಮಿ ಮಠಕ್ಕೆ ಸೇರಿದ 11 ಎಕರೆ 19 ಗುಂಟೆ ಭೂಮಿಯಲ್ಲೂ ವಕ್ಫ್ ಎಂದು ನಮೂದಾಗಿತ್ತು. ಬಳಿಕ ಸ್ಥಳೀಯ ದರ್ಗಾದ ಮುಖ್ಯಸ್ಥರು ಸಭೆ ನಡೆಸಿ, ಮಠಕ್ಕೆ ಸೇರಿದ ಆಸ್ತಿ ನಮ್ಮದಲ್ಲ ಎಂದು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಹೀಗೆ ರಾಜ್ಯದ ನಾನಾ ಕಡೆ ಈ ರೀತಿಯ ಪ್ರಕರಣಗಳು ನಡೆಯುತ್ತಿರುವುದು ಬೆಳಕಿಗೆ ಬರುತ್ತಿವೆ ಎಂದು ತಿಳಿಸಿದರು.

ಕಮ್ಮರಚೇಡು ಮಠದ ಶ್ರೀ ಕಲ್ಯಾಣಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರದ ನಡೆಯಿಂದ ತೀವ್ರ ಬೇಸರವಾಗಿದೆ. ವಕ್ಫ್‌ ಬೋರ್ಡ್‌ನಿಂದಾಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಸಂವಿಧಾನಕ್ಕೆ ಬೆಲೆ ನೀಡದೇ ಕಾನೂನು ರೂಪಿಸಿರುವ ನಡೆ ಅತ್ಯಂತ ಅಸಹನೀಯ. ಇಡೀ ರಾಜ್ಯದ ಜನತೆ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಡರೈತರ ಭೂಮಿಯಲ್ಲಿ ವಕ್ಫ್‌ ಬೋರ್ಡ್‌ ಎಂದು ನಮೂದಾಗಿದ್ದು ರೈತಾಪಿ ವರ್ಗ ಗೋಳಿಡುತ್ತಿದ್ದಾರೆ ಎಂದರು.

ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಗೌರವ ಕೊಡುವುದಿದ್ದರೆ ವಕ್ಫ್ ಬೋರ್ಡ್ ತೆಗೆದು ಹಾಕಬೇಕು. ಇಲ್ಲದಿದ್ದರೆ ಮಠಾಧೀಶರು ಹಳ್ಳಿಹಳ್ಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ರೈತರ ಪರವಾಗಿ ಧರ್ಮಪರಿಷತ್‌ ನಿಲ್ಲುತ್ತದೆ ಎಂದು ತಿಳಿಸಿದರು. ಜಮೀರ್ ಅಹಮದ್‌ ಧರ್ಮದಲ್ಲಿ ಮುಸ್ಲಿಂ ಆಗಿದ್ದರೂ ತಾವೊಬ್ಬ ಸಚಿವ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ತನಗಿಷ್ಟ ಬಂದಂತೆ ಹೇಳಿಕೆಗಳನ್ನು ನೀಡಬಾರದು ಎಂದು ತಾಕೀತು ಮಾಡಿದರು.

ಕೊಟ್ಟೂರು ಚಾನಕೋಟಿ ಮಠದ ಡಾ. ಸಿದ್ಧಲಿಂಗ ಶಿವಾಚಾರ್ಯಸ್ವಾಮಿ, ಶಿವಯೋಗಿ ವೀರಗಂಗಾಧರೇಶ್ವರಸ್ವಾಮಿ, ಬೆಣ್ಣೆಹಳ್ಳಿ ಹಿರೇಮಠದ ಶ್ರೀ ಪಂಚಾಕ್ಷರಿ ಶಿವಾಚಾರ್ಯಸ್ವಾಮಿ, ಹರಗಿನಡೋಣಿ ಮಠದ ಶ್ರೀಅಭಿನವ ಸಿದ್ಧಲಿಂಗ ಶಿವಾಚಾರ್ಯಸ್ವಾಮಿ, ನಂದೀಪುರ ಮಠದ ಶ್ರೀ ಡಾ. ಮಹೇಶ್ವರಸ್ವಾಮಿ ಸೇರಿದಂತೆ ಬಳ್ಳಾರಿ-ವಿಜಯನಗರ ಜಿಲ್ಲೆಗಳ ವಿವಿಧ ಮಠಾಧೀಶರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.