ದತ್ತಪೀಠ-ಮಾಣಿಕ್ಯಧಾರ ರಸ್ತೆ ದುರಸ್ತಿಪಡಿಸಲು ಆಗ್ರಹ

| Published : May 01 2024, 01:17 AM IST

ದತ್ತಪೀಠ-ಮಾಣಿಕ್ಯಧಾರ ರಸ್ತೆ ದುರಸ್ತಿಪಡಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರಿನ ದತ್ತಪೀಠ- ಮಾಣಿಕ್ಯಧಾರ ರಸ್ತೆ ದುರಸ್ತಿಪಡಿಸಬೇಕೆಂದು ಆಗ್ರಹಿಸಿ ಸಮಾಜ ಪರಿವರ್ತನ ಸಂಘದ ಮುಖಂಡರು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಸಮಾಜ ಪರಿವರ್ತನ ಸಂಘದಿಂದ ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್‌ಗೆ ಮನವಿ

ಕನ್ನಡಪ್ರಭವಾರ್ತೆ, ಚಿಕ್ಕಮಗಳೂರು

ಮಾಣಿಕ್ಯಧಾರಕ್ಕೆ ಸಾಗುವ ರಸ್ತೆಯು ತೀವ್ರ ಹದಗೆಟ್ಟಿದೆ, ಈ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಮಾಜ ಪರಿವರ್ತನ ಸಂಘದ ಮುಖಂಡರು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಅವರಿಗೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಆರ್. ಶ್ರೀನಿವಾಸ್, ಗಿರಿಪ್ರದೇಶದ ಮಾಣಿಕ್ಯಧಾರಕ್ಕೆ ಸಾಗುವ ರಸ್ತೆ ಬಹಳಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಈಚೆಗೆ ಬಸ್‌ವೊಂದು ಉರುಳಿ ಓರ್ವ ಬಾಲಕ ಮೃತಪಟ್ಟಿದ್ದಾನೆ. ಸುಮಾರು 25 ಮಂದಿ ಗಾಯಾಳುಗಳಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ರಸ್ತೆಯನ್ನು ಅಚ್ಚುಕಟ್ಟುಗೊಳಿಸಿದರೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.

ಶ್ರೀ ಗುರುದತ್ತಾತ್ರೇಯಸ್ವಾಮಿ ಬಾಬಾಬುಡನ್ ದರ್ಗಾದಿಂದ ಮಾಣಿಕ್ಯಧಾರಕ್ಕೆ ಮೂರು ಕಿ.ಮೀ.ಗಳ ಅಂತರವಿದೆ. ಈ ಪೈಕಿ ಒಂದು ಕಿ.ಮೀ.ಗೆ ಮಾತ್ರ ಕಾಂಕ್ರೀಟೀಕರಣ ಮಾಡಿರುವುದಿಲ್ಲ. ಈ ಅಂತರ ದಲ್ಲಿ ತೀವ್ರ ತರದ ಗುಂಡಿಗಳಿದ್ದು ಈಚೆಗೆ ನಡೆದ ಬಸ್ ಅಪಘಾತಕ್ಕೆ ಈ ರಸ್ತೆಯೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

ಉಳಿದಿರುವ ಒಂದು ಕಿ.ಮೀ. ರಸ್ತೆಯನ್ನು ಕಾಂಕ್ರೀಟೀಕರಣ ಮಾಡಲು ಕಾಣದ ಕೈಗಳು ತಡೆಯೊಡ್ಡಿವೆ. ಮಾಣಿಕ್ಯ ಧಾರಕ್ಕೆ ಹೋಗುವ ಪ್ರವಾಸಿಗರನ್ನು ಖಾಸಗೀ ಜೀಪ್‌ಗಳಲ್ಲೇ ಭದ್ರತೆ ಯಿಲ್ಲದೇ ಕರೆದೊಯ್ದು ಹಣ ಸುಲಿಗೆ ಮಾಡುವ ದುರುದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಸಂಘದ ಸಂಘಟನಾ ಕಾರ್ಯದರ್ಶಿ ಜಗದೀಶ್ ಕೋಟೆ ಮಾತನಾಡಿ, ಪ್ರವಾಸಿಗರನ್ನು ಭದ್ರತೆ ಇಲ್ಲದೇ ಕರೆದೊಯ್ಯುವ ಜೀಪ್‌ಗಳಿಗೆ ಕಡಿವಾಣ ಹಾಕುವ ಮೂಲಕ ಗುಣಮಟ್ಟದ ವಾಹನಗಳನ್ನು ಪ್ರವಾಸಿಗರು ಕೊಂಡೊಯ್ಯಲು ಕ್ರಮವಹಿಸಬೇಕು. ದರ್ಗಾದಿಂದ ಮಾಣಿಕ್ಯಧಾರದ ರಸ್ತೆಯ ಪಕ್ಕದಲ್ಲಿ ಪ್ರಪಾತಗಳಿದ್ದು ಕೂಡಲೇ ಇಲ್ಲಿ ಬ್ಯಾರಿಕೇಡ್‌ ಅಳವಡಿಸಬೇಕು ಎಂದರು.

ಸರ್ಕಾರ ಪ್ರತಿ ವರ್ಷ ಪ್ರವಾಸೋದ್ಯಮ ಉತ್ತೇಜನಕ್ಕೆ ಮತ್ತು ರಸ್ತೆ ನಿರ್ವಹಣೆಗೆ ಕೋಟಿಗಟ್ಟಲೇ ಹಣ ಬಿಡುಗಡೆ ಮಾಡುತ್ತಿವೆ. ಇದರಿಂದ ರಸ್ತೆ ನಿರ್ವಹಣೆ ಮಾಡದೇ ಪ್ರವಾಸಿಗರಿಗೆ ತೊಂದರೆಗಳಾಗಿ ಅಪಘಾತಗಳು ಹೆಚ್ಚುತ್ತಿವೆ. ಪರಿಣಾಮ ಪ್ರವಾಸಿಗರಿಗೆ ಜಿಲ್ಲೆಯ ಪ್ರವಾಸೋದ್ಯಮ ವ್ಯವಸ್ಥೆ ಬಗ್ಗೆ ಕೆಟ್ಟ ಆಲೋಚನೆ ಮೂಡುತ್ತಿವೆ. ಹಾಗಾಗಿ ಗಿರಿಪ್ರದೇಶದ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸೂಚನಾ ಫಲಕ ಅಳವಡಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಂ ಇದ್ದರು.