ನಿವೇಶನ ರಹಿತರಿಗೆ ನಿವೇಶನ ನೀಡುವದು, ಮನೆ ಇಲ್ಲದವರಿಗೆ ಮನೆ ಮಂಜೂರು ಮಾಡುವದು, ಶಿರಗುಂಪಿ ಗ್ರಾಮದಲ್ಲಿ ಸುಲಭ ಶೌಚಾಲಯ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಬೇಕು

ಕುಷ್ಟಗಿ: ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಕಾಯ್ದೆ ರದ್ದುಗೊಳಿಸಿ ಮನರೇಗಾ ಕಾಯ್ದೆ ಮರು ಅನುಷ್ಠಾನಕ್ಕೆ ಒತ್ತಾಯಿಸಿ ಹಾಗೂ ಮಾರ್ಚ ತಿಂಗಳೊಳಗೆ ಉಳಿದಿರುವ ಮಾನವ ದಿನಗಳಿಗೆ ಅನುಗುಣವಾಗಿ ಕೆಲಸ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ತಾಲೂಕಿನ ಶಿರಗುಂಪಿ ಗ್ರಾಪಂ ಮುಂದೆ ಧರಣಿ ನಡೆಸಿ ಮನವಿ ಸಲ್ಲಿಸಿದರು.

ರೈತ ಸಂಘದ ಮುಖಂಡ ಆರ್.ಕೆ.ದೇಸಾಯಿ ಮಾತನಾಡಿ,ನಿವೇಶನ ರಹಿತರಿಗೆ ನಿವೇಶನ ನೀಡುವದು, ಮನೆ ಇಲ್ಲದವರಿಗೆ ಮನೆ ಮಂಜೂರು ಮಾಡುವದು, ಶಿರಗುಂಪಿ ಗ್ರಾಮದಲ್ಲಿ ಸುಲಭ ಶೌಚಾಲಯ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಬೇಕು, ನರೇಗಾ ಜಾಬ್ ಕಾರ್ಡ್‌ ಹೊಂದಿದ ಎಲ್ಲ ಕೂಲಿಕಾರರಿಗೆ ಕೆಲಸ ನೀಡಬೇಕು, ನರೇಗಾ ಕೂಲಿ ₹370 ಸಂಪೂರ್ಣ ಪಾವತಿ ಮಾಡಬೇಕು, ವಿಕಲಚೇತನರಿಗೆ ಸ್ವಗ್ರಾಮದಲ್ಲಿ ಕೆಲಸ ನೀಡಬೇಕು, ರೈತರಿಗೆ ದನದ ಶೆಡ್, ಕುರಿ ಶೆಡ್ ಕಟ್ಟಿಸಿಕೊಳ್ಳಲು ಅನುಕೂಲವಾಗುವಂತೆ ಕ್ರಿಯಾ ಯೋಜನೆ ರೂಪಿಸಬೇಕು,ವೈಯಕ್ತಿಕ ಶೌಚಾಲಯ ಮತ್ತು ಜನತಾ ಮನೆ ಬಿಲ್ಲು ಕೂಡಲೆ ಪಾವತಿಸಬೇಕು, ದುರಗಮ್ಮ ದೇವರ ಗುಡಿ ಮುಂದೆ ಇರುವ ಬಾವಿಯನ್ನು ಸ್ವಚ್ಚಗೊಳಿಸಬೇಕು, ಮುಂಗಾರು ಮಳೆಯಿಂದ ಮನೆಯಲ್ಲಿ ನೀರು ನುಗ್ಗಿ ಉಂಟಾದ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಪಿಡಿಒ ರಾಮಣ್ಣ ದಾಸರ ಮಾತನಾಡಿ, ನರೇಗಾ ಯೋಜನೆಯಲ್ಲಿ ಕೆಲಸ ಕೊಡುವದಾಗಿ ಭರವಸೆ ನೀಡಿದರು. ಉಳಿದ ಬೇಡಿಕೆ ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಸೂಕ್ತ ಕ್ರಮಕ್ಕೆ ಮುಂದಾಗುತ್ತೇನೆ ಎಂದು ತಿಳಿಸಿದರು.

ಕರ್ನಾಟಕ ರೈತ ಪ್ರಾಂತ ಸಂಘದ ತಾಲೂಕಾಧ್ಯಕ್ಷ ಸಂಗಮ್ಮ ಗುಳಗೌಡ್ರ, ತಾಲೂಕು ಕಾರ್ಯದರ್ಶಿ ಶೇಖರಪ್ಪ ಎಲಿಗಾರ, ಶಿರಗುಂಪಿ ಗ್ರಾಮ ಘಟಕದ ಅಧ್ಯಕ್ಷ ನಾಗಪ್ಪ ಕೂಡ್ಲೂರು, ಬಾನುಬೇಗಂ ನಡುವಲಮನಿ, ಪಾರ್ವತೆಮ್ಮ ಮಾದರ, ಮಾಂತೇಶ ಸಜ್ಜನ, ಹನುಮಂತಪ್ಪ ವಾಲಿಕಾರ, ಮುರ್ತುಜಾಸಾಬ್‌, ರುದ್ರಪ್ಪ ಕುಂಬಾರ ಸೇರಿದಂತೆ ಅನೇಕರು ಇದ್ದರು. ಪೊಲೀಸ್‌ ಇಲಾಖೆಯವರು ಬಂದೋಬಸ್ತ್ ಒದಗಿಸಿದ್ದರು.