ಸಾರಾಂಶ
- ಚಿಕ್ಕಮಗಳೂರಿನಲ್ಲಿ ರೈತ ಹುತಾತ್ಮರ ದಿನಾಚರಣೆ, ಹಲವು ಸಂಘಟನೆಗಳ ಸಾಥ್
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕರ್ನಾಟಕ ರಾಜ್ಯ ರೈತ ಸಂಘದ ಆಶ್ರಯದಲ್ಲಿ ಸೋಮವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ರೈತ ಹುತಾತ್ಮರ ದಿನಾಚರಣೆ ನಡೆಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ಭಾರತ ದೇಶದ ಬೆನ್ನಲೆಬು ರೈತರು ಎಂದು ಹೇಳಲಾಗುತ್ತಿದೆ. ಆದರೆ, ಇಂದು ನಮ್ಮನ್ನಾಳುವ ಸರ್ಕಾರಗಳಲ್ಲಿ ರೈತನ ಪದ ನಶಿಸಿ ಹೋಗುವಂತಾಗಿದೆ ಮತ್ತು ರೈತರ ಮೇಲೆ ಕಿಂಚಿತ್ತೂ ಗೌರವವಿಲ್ಲದಂತಾಗಿದೆ ಎಂದು ಹೇಳಿದರು.ನಮ್ಮ ದೇಶದಲ್ಲಿ ಪ್ರಾರಂಭದಲ್ಲಿ ರೈತ ಸಂಘಟನೆಗಳು, ದಲಿತ ಸಂಘಟನೆಗಳು ಮತ್ತು ಕಮ್ಯೂನಿಷ್ಟ್ ಚಳುವಳಿಯಿಂದ ಒಂದಷ್ಟು ಸಮಾಜದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿ ಉಳಿದಿದ್ದರೆ ಈ ಮೂರು ಸಂಘಟನೆಗಳಿಂದ ಮಾತ್ರ ಎಂದು ತಿಳಿಸಿದರು.
ಪಂಜಾಬ್ ಗಡಿಯಲ್ಲಿ ಲಕ್ಷಾಂತರ ರೈತರು ಚಳುವಳಿ ಮಾಡಿದರು. ನಾವುಗಳು ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ನಮ್ಮ ಸಮಸ್ಯೆಗಳನ್ನು ಅವರ ಬಳಿ ಹೇಳಿಕೊಂಡು ಬಗೆಹರಿಸುವಂತೆ ಮನವಿ ಮಾಡಲು ಹೋಗುವ ಸಂದರ್ಭದಲ್ಲಿ ಆಳುವ ಸರ್ಕಾರಗಳು ರೈತರ ಮೇಲೆ ಗೂಂಡಾ ವರ್ತನೆ ತೋರಿ ಅವರಿಗೆ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಲು ಅವಕಾಶ ಕೊಡಲಿಲ್ಲ ಇದು ರೈತರಿಗೆ ಬಗೆದ ದ್ರೋಹವಾಗಿದೆ ಎಂದರು.ಪಂಜಾಬ್ ಗಡಿಯಲ್ಲಿ ರೈತರು ತೆರಳದಂತೆ ಮುಳ್ಳು ರಸ್ತೆಯನ್ನು ಪರಿವರ್ತನೆ ಮಾಡುವ ಮೂಲಕ ರೈತರ ಚಳುವಳಿ ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡಿತು. ನಮ್ಮ ಹೋರಾಟದ ಇತಿಹಾಸದಲ್ಲಿ ಈ ರೀತಿ ತೀರ್ಮಾನ ತೆಗೆದುಕೊಂಡ ಸರ್ಕಾರವನ್ನು ನಾವುಗಳು ನೋಡಿಯೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದರೇಶ್ ಮಾತನಾಡಿ, ಸ್ಥಳಿಯ ರೈತ ತಮ್ಮ ಕಾಯಕ ನಿಲ್ಲಿಸಿದರೆ ದೇಶವೇ ಸ್ತಬ್ದವಾಗುತ್ತದೆ. ಈ ನಿಟ್ಟಿನಲ್ಲಿ ರೈತರು ಸುಮ್ಮನೆ ಕೂರದೇ ಹೋರಾಟಗಳನ್ನು ಮಾಡುವ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮುಂದಾಗುವಂತೆ ಕರೆ ನೀಡಿದರು.ಸರ್ಕಾರಗಳು ಸರ್ಫೆಸಿ ಕಾಯಿದೆ ಜಾರಿಗೆ ತಂದಿದ್ದು, ಇದು ರೈತರಿಗೆ ಮರಣ ಶಾಸನವಾಗಿ ಪರಿಣಮಿಸಿದೆ. ರೈತರ ಆಸ್ತಿ ಯನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲು ಪಿತೂರಿ ನಡೆಯುತ್ತಿದೆ. ಇಂತಹ ಹೀನಾಯ ಸ್ಥಿತಿಗೆ ರೈತರು ಬರುತ್ತಿ ರುವುದು ಬೇಸರದ ಸಂಗತಿ ಎಂದು ಹೇಳಿದರು.
ರೈತರ ಹೋರಾಟಗಳಿಗೆ ಸಿಪಿಐ ಪಕ್ಷ ಹಿಂದಿನಿಂದಲೂ ಬೆಂಬಲಿಸಿಕೊಂಡು ಬರುತ್ತಿದೆ ಮುಂದೆಯೂ ಸಹ ರೈತರ ಹೋರಾಟ ಗಳಿಗೆ ಬೆನ್ನೆಲುಬಾಗಿ ನಿಲ್ಲಲಿದೆ. ಕಮ್ಯೂನಿಷ್ಟ್ ಪಕ್ಷದ ತೀರ್ಮಾನವೇ ರೈತರ ಮತ್ತು ಕಾರ್ಮಿಕರ ಪರವಾಗಿ ಹೋರಾಟ ಮಾಡುವ ಸಿದ್ದಾಂತವಾಗಿದೆ ಎಂದು ತಿಳಿಸಿದರು.ರೈತ ಮತ್ತು ನಾಗರಿಕ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಎಸ್. ವಿಜಯಕುಮಾರ್ ಮಾತನಾಡಿ, ಮಲೆನಾಡಿನ ರೈತರ ಸಮಸ್ಯೆ ಒಂದು ಕಡೆಯಾದರೆ, ಬಯಲುಸೀಮೆ ರೈತರ ಸಮಸ್ಯೆ ಇದೆ. ನಮ್ಮನ್ನಾಳುವ ಸರ್ಕಾರಗಳು ರೈತರಿಂದ ಭೂಮಿ ಯನ್ನು ಕಿತ್ತುಕೊಳ್ಳುವ ಕೆಲಸ ನಡೆಯುತ್ತಿವೆ. ಕಳೆದ ಹಲವಾರು ವರ್ಷಗಳಿಂದ ಸಾವಿರಾರು ರೈತರು ಕಂದಾಯ ಭೂಮಿ ಯನ್ನು ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಇದನ್ನು ಡೀಮ್ಡ್ ಪಾರೆಸ್ಟ್ ಎಂದು ಬದಲಾವಣೆ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ ಎಂದರು.
ಇಂದು ನಾವುಗಳು ರೈತರ ಮತ್ತು ಬೆಳೆಗಾರರ ಮುಖಂಡರನ್ನು ಹಾಗೂ ಸಂಘ ಸಂಸ್ಥೆಗಳ ಮುಖಂಡರನ್ನು ಭೇಟಿಯಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸಲಾಗಿದೆ. ಕಸ್ತೂರಿ ರಂಗನ್ ವರದಿ ಜಿಲ್ಲೆಯಲ್ಲಿ ಜಾರಿಯಾದರೆ ಎಲ್ಲರಿಗೂ ಕಂಟಕ ವಾಗಲಿದೆ ಎಂದು ಅರಿತು ಹೋರಾಟ ಮಾಡಿದ್ದರಿಂದ ಕಸ್ತೂರಿ ರಂಗನ್ ವರದಿ ವಾಪಸ್ ಹೋಗಿದ್ದು, ಆ ವರದಿ ಮತ್ತೆ ಯಾವತ್ತಾದರೂ ಬರಬಹುದು ಬಹಳ ಎಚ್ಚರಿಕೆಯಿಂದ ಇರುವಂತೆ ರೈತರಿಗೆ ಸಲಹೆ ನೀಡಿದರು.ನಮೂನೆ 50 ಮತ್ತು 53 ರಲ್ಲಿ ಮಂಜೂರು ಮಾಡಿದ ಸಾವಿರಾರು ರೈತರ ಭೂಮಿ ವಜಾಗೊಳಿಸುತ್ತಿದ್ದು, ಈ ಬಗ್ಗೆ ಮರು ಸಮೀಕ್ಷೆ ಮಾಡಿ ಅರ್ಹರ ಭೂಮಿಗಳಿಗೆ ಖಾತೆ ಪುನರ್ ಸ್ಥಾಪಿಸಬೇಕು. ಕಾಡು ಪ್ರಾಣಿಗಳಿಂದ ರೈತರ ಬೆಳೆ ಹಾನಿ ಯಾಗದಂತೆ ಕ್ರಮಕೈಗೊಳ್ಳಬೇಕು. ಬೆಳೆ ಹಾನಿಯಾದ ರೈತರಿಗೆ ಪರಿಹಾರವನ್ನು ವೈಜ್ಞಾನಿಕವಾಗಿ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಸುನಿಲ್, ರೈತ ಮುಖಂಡರಾದ ಜಿ.ವಿನಯ್, ಜಯಪ್ರಕಾಶ್, ಕೆಂಚೇಗೌಡ, ಈಶ್ವರೇಗೌಡ, ಪುಟ್ಟಸ್ವಾಮಿಗೌಡ ಸೇರಿದಂತೆ ರೈತರು ಹಾಜರಿದ್ದರು. 21 ಕೆಸಿಕೆಎಂ 4ಕರ್ನಾಟಕ ರಾಜ್ಯ ರೈತ ಸಂಘದ ಆಶ್ರಯದಲ್ಲಿ ಸೋಮವಾರ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ರೈತ ಹುತಾತ್ಮರ ದಿನಾಚರಣೆ ನಡೆಯಿತು.