ಬಿಜೆಪಿ ಶಾಸಕರ ಅಮಾನತು ಹಿಂಪಡೆಯಲು ಒತ್ತಾಯ

| Published : Mar 29 2025, 12:31 AM IST

ಸಾರಾಂಶ

ವಿಧಾನಸಭಾ ಅಧಿವೇಶನದ ಅಂತಿಮ ದಿನದಂದು ಕಾಂಗ್ರೆಸ್ ಸರ್ಕಾರದ ಹನಿಟ್ರ್ಯಾಪ್ ಮತ್ತು ಸಂವಿಧಾನ ಬಾಹಿರ ಅಲ್ಪಸಂಖ್ಯಾತರ ಮೀಸಲಾತಿಯನ್ನು ತಡೆಯುತ್ತಾರೆ ಎಂಬ ಕಾರಣಕ್ಕೆ 18 ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದು, ಅಮಾನತು ಹಿಂಪಡೆಯದಿದ್ದಲ್ಲಿ ಮೂಡುಬಿದಿರೆ ಕ್ಷೇತ್ರದಲ್ಲಿ ಬ್ರಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಬಿಜೆಪಿಯ ಮೂಲ್ಕಿ-ಮೂಡುಬಿದಿರೆ ಮಂಡಲಾಧ್ಯಕ್ಷ ದಿನೇಶ್‌ ಪುತ್ರನ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಮೂಲ್ಕಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರನ್ನು ವಿಧಾನಸಭೆಯಿಂದ ಅಮಾನತು ಮಾಡಿರುವ ಸ್ಪೀಕರ್ ನಡೆ ದುರಾದೃಷ್ಟದಿಂದ ಕೂಡಿದೆ. ಸ್ಪೀಕರ್ ಯು.ಟಿ.ಖಾದರ್ ನಮ್ಮದೇ ಜಿಲ್ಲೆಯವರು ಆಗಿದ್ದರಿಂದ ಅವರ ಮೇಲೆ ಪಕ್ಷಾತೀತವಾದ ಗೌರವ ಇತ್ತು. ಜಿಲ್ಲೆಯ ಬಗೆಗಿನ ಕಾಳಜಿ ಇರಬಹುದು ಎಂಬ ನಂಬಿಕೆ ಇತ್ತು. ಆದರೆ ಈ ನಂಬಿಕೆಯನ್ನು ಅವರು ಹುಸಿಗೊಳಿಸಿದ್ದಾರೆ. ಕೇವಲ ಸ್ಪೀಕರ್ ಆಗಿಲ್ಲದೆ ಕಾಂಗ್ರೆಸ್ ಪಕ್ಷದ ಅಡಿಯಾಳಿನಂತೆ ವರ್ತಿಸಿ ಬಿಜೆಪಿ ಶಾಸಕರ ಮೇಲೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಿದ್ದರಾಮಯ್ಯ ನುಡಿದಂತೆ ನಡೆದ ಸ್ಪೀಕರ್ ಎನಿಸಿಕೊಂಡಿರುವುದು ದುರಂತ ಎಂದರು.

ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಸುನೀಲ್‌ ಆಳ್ವ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಹಾಲಿನ ಬೆಲೆಯೇರಿಕೆ ಸೇರಿದಂತೆ ಎಲ್ಲದರ ದರ ಹೆಚ್ಚಿಸಿ ಜನರ ಮೇಲೆ ಹೊರೆ ಹಾಕುತ್ತಿದೆ. ಗ್ಯಾರಂಟಿ ಯೋಜನೆಯ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದ್ದು, ಈ ರೀತಿ ಮುಂದುವರಿದಲ್ಲಿ ಜನರು ದಂಗೆಯೇಳಲಿದ್ದಾರೆಂದು ತಿಳಿಸಿದರು.

ಬಿಜೆಪಿಯ ಜಿಲ್ಲಾ ಮಾಜಿ ಉಪಾಧ್ಯಕ್ಷ ಈಶ್ವರ್‌ ಕಟೀಲು ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮೂಡುಬಿದರೆ ಮಂಡಲದ ಪ್ರಧಾನ ಕಾರ್ಯದರ್ಶಿ ರಂಜಿತ್‌ ಪೂಜಾರಿ, ಹರಿಪ್ರಸಾದ್‌, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್‌ ಅಂಚನ್‌, ಮಾಜಿ ಅಧ್ಯಕ್ಷ ಸುಭಾಷ್‌ ಶೆಟ್ಟಿ, ಸದಸ್ಯ ಶೈಲೇಶ್‌ ಕುಮಾರ್‌ ಮತ್ತಿತರರಿದ್ದರು.