ರೇವಣಸಿದ್ದೇಶ್ವರ ದೇಗುಲದ ಆಸ್ತಿ ಉಳಿಸಲು ಆಗ್ರಹ

| Published : Oct 23 2024, 01:45 AM IST

ಸಾರಾಂಶ

ರಾಮನಗರ: ತಾಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ರೇವಣಸಿದ್ದೇಶ್ವರ ದೇವಾಲಯದ ಆಸ್ತಿ ಉಳಿಸುವಂತೆ ಒತ್ತಾಯಿಸಿ ಸ್ಥಳೀಯರು ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟಿಸಿದರಲ್ಲದೆ, ಒತ್ತುವರಿದಾರರೊಂದಿಗೆ ಮಾತಿನ ಚಕಮಕಿ ನಡೆಸಿದ ಘಟನೆಯೂ ಜರುಗಿತು.

ರಾಮನಗರ: ತಾಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ರೇವಣಸಿದ್ದೇಶ್ವರ ದೇವಾಲಯದ ಆಸ್ತಿ ಉಳಿಸುವಂತೆ ಒತ್ತಾಯಿಸಿ ಸ್ಥಳೀಯರು ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟಿಸಿದರಲ್ಲದೆ, ಒತ್ತುವರಿದಾರರೊಂದಿಗೆ ಮಾತಿನ ಚಕಮಕಿ ನಡೆಸಿದ ಘಟನೆಯೂ ಜರುಗಿತು.

ರೇವಣಸಿದ್ದೇಶ್ವರ ದೇವಾಲಯದ ಜಮೀನಿಗೆ ಸಂಬಂಧಪಟ್ಟಂತೆ ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಜಮೀನಿನ ಅಭಿವೃದ್ಧಿ ಕೆಲಸದ ಜೊತೆಗೆ ದೇವಾಲಯಕ್ಕೆ ಸೇರಿದ ಆಸ್ತಿಯನ್ನು ಒತ್ತುವರಿ ಮಾಡಿಕೊಂಡು ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ದೇವಾಲಯದ ಆಸ್ತಿ ಉಳಿಸಲು ತಾಲೂಕು ಆಡಳಿತ ದೇವಾಲಯದ ಆಡಳಿತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಅಳತೆ ಮಾಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ಪ್ರತಿಭಟನಾನಿರತ ಆನಂದ್ ಮಾತನಾಡಿ, ಖಾಸಗಿ ವ್ಯಕ್ತಿಯೊಬ್ಬರು ದೇವಾಲಯದ ಜಮೀನಿಗೆ ಹೊಂದಿಕೊಂಡಂತೆ ಜಮೀನು ಖರೀದಿಸಿದ್ದು, ಅವರ ಜಮೀನಿನಲ್ಲಿ ಅಭಿವೃದ್ಧಿ ಮಾಡುವ ಜೊತೆಗೆ ದೇವಾಲಯದ ಜಮೀನಿನಲ್ಲಿದ್ದ ಕಲ್ಲುಬಂಡೆ ಯಾರ ಅನುಮತಿಯನ್ನೂ ಪಡೆಯದೆ ಹೊಡೆದಿದ್ದಾರೆ. ಜೊತೆಗೆ ಗಿಡ ಮರ ಕತ್ತರಿಸಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ನಾವು ತಹಸೀಲ್ದಾರ್ ಇಲ್ಲಿನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಅಳತೆ ಆಗುವವರೆಗೆ ಕೆಲಸ ನಿರ್ವಹಿಸದಂತೆ ತಿಳಿಸಿದ್ದರೂ ಮಂಗಳವಾರ ಏಕಾಏಕಿ ಜೆಸಿಬಿ ಟ್ರ್ಯಾಕ್ಟರ್ ತಂದು ದೇವಾಲಯದ ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕೂಡಲೇ ತಹಸೀಲ್ದಾರರು ಅಳತೆ ಮಾಡಿಸಿಕೊಟ್ಟು ದೇವಾಲಯದ ಆಸ್ತಿ ಉಳಿಸಬೇಕು. ಇಲ್ಲದಿದ್ದರೆ ಮುಂದೆ ಜಿಲ್ಲಾ ಮಟ್ಟದಲ್ಲಿ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನಾ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕೈಲಾಂಚ ಉಪ ತಹಸೀಲ್ದಾರ್ ರುದ್ರಮ್ಮ, ರಾಜಸ್ವ ನಿರೀಕ್ಷಕ ಪುಟ್ಟರಾಜು, ಸರ್ವೆಯರ್ ಬಲರಾಮ್ ಜಾಗ ಅಳತೆ ಮಾಡಲು ಮುಂದಾದರು. ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಕೆ.ಕೆ.ರೂಪಾ ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಅಳತೆ ಮಾಡಲಾಯಿತು.

ಅಳತೆ ಜಾಗದಲ್ಲಿ ಖಾಸಗಿ ವ್ಯಕ್ತಿ ಮತ್ತು ಸ್ಥಳೀಯ ಜನರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಶಾಂತಿಯುತವಾಗಿ ಅಳತೆ ಮಾಡಿಸಲು ಮುಂದಾದರು. ನಂತರ ಸರ್ವೆಯರ್ವ ಜಾಗ ಗುರುತಿಸಿಕೊಟ್ಟರು.

ದೇವಾಲಯದ ಆಸ್ತಿ ಈ ಹಿಂದೆ ಅಳೆದಾಗ ಈಗಿನ ಅಳತೆಗಿಂತ ಕಡಿಮೆ ಆಗಿತ್ತು. ಆಳತೆಯಲ್ಲಿ ವ್ಯತ್ಯಾಸ ಕಾಣುತ್ತಿದ್ದು, ಡಿಜಿಟಲ್ ಸರ್ವೆ ಮೂಲಕ ಅಳತೆ ಮಾಡಿಸಿ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಜನರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎ.ಸಿ.ಕೆಂಪಯ್ಯ, ತಮ್ಮಣ್ಣ, ಗಂಗಾಧರ್, ಸಂಜಯ್, ನಾಗೇಂದ್ರನಾಯ್ಕ, ಕುಮಾರ್, ಆನಂದ್, ವಿಜಿ, ರಾಜು, ಸತೀಶ್, ನರಸಿಂಹಯ್ಯ, ಎಲ್ಲೇಗೌಡ, ಕಿರಣ್ ಇತರರು ಹಾಜರಿದ್ದರು.

22ಕೆಆರ್ ಎಂಎನ್ 6.ಜೆಪಿಜಿ

ರಾಮನಗರ ತಾಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ರೇವಣಸಿದ್ದೇಶ್ವರ ದೇವಾಲಯದ ಸ್ಥಳ ಒತ್ತುವರಿಯಾಗಿರುವ ಜಾಗದಲ್ಲಿ ಸ್ಥಳೀಯರು ಸೇರಿರುವುದು.