ಬ್ಯಾಡಗಿ: ಪಟ್ಟಣದಲ್ಲಿ ಎಲ್ಲೆಂದರಲ್ಲಿ ತಲೆ ಎತ್ತಿರುವ ಮಟನ್, ಚಿಕನ್ ಹಾಗೂ ಮೀನು ಅಂಗಡಿಗಳನ್ನು ಪುರಸಭೆ ನಿರ್ಮಿಸಿರುವ ಕಟ್ಟಡಗಳಿಗೆ ಸ್ಥಳಾಂತರಿಸುವಂತೆ ಮಂಗಳವಾರ ಸಾರ್ವಜನಿಕರು ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ವಿನಾಯಕ ಕಂಬಳಿ, ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿರುವ ಎಸ್.ಜೆ.ಜೆ.ಎಂ. ಸರ್ಕಾರಿ ಶಾಲೆಯಲ್ಲಿ, ಎಸ್.ಎನ್ .ಫಾರ್ಮಾ ಸುತ್ತಮುತ್ತ, ಬಸ್ ನಿಲ್ದಾಣ ಪ್ರದೇಶ, ರಟ್ಟಿಹಳ್ಳಿ ರಸ್ತೆ ಹಾಗೂ ಕದರಮಂಡಲಗಿ ರಸ್ತೆಯಲ್ಲಿ ಅನೇಕ ಮಟನ್, ಚಿಕನ್ ಮತ್ತು ಮೀನು ಅಂಗಡಿಗಳು ತಲೆ ಎತ್ತಿವೆ, ಸದರಿ ಅಂಗಡಿಗಳಲ್ಲಿ ಸಮರ್ಪಕ ಸ್ವಚ್ಛತೆ ಇಲ್ಲದೆ ಇರುವುದರಿಂದ ಸಾರ್ವಜನಿಕ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ಅಂಗಡಿಗಳ ಸುತ್ತಮುತ್ತ ಕಸ, ದುರ್ವಾಸನೆ, ನೊಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಬೀದಿ ನಾಯಿಗಳ ಹಾವಳಿ ಸಹ ಹೆಚ್ಚಾಗಿದೆ. ಆದ್ದರಿಂದ ಇವುಗಳನ್ನು ಪುರಸಭೆ ಮಾಂಸದ ಅಂಗಡಿಗಾಗಿ ನಿರ್ಮಾಣ ಮಾಡಿರುವ ಮಳಿಗೆಗಳಿಗೆ ಸ್ಥಳಾಂತರ ಮಾಡಿ ಎಂದು ಆಗ್ರಹಿಸಿದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಪಾಂಡುರಂಗ ಸುತಾರ ಮಾತನಾಡಿ, ಸಮಸ್ಯೆ ಕುರಿತಂತೆ ಸಾಕಷ್ಟು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ, ಸಾರ್ವಜನಿಕರ ಮನವಿಗೂ ಸ್ಪಂದಿಸದಿರುವ ಅಧಿಕಾರಿಗಳು ಯಾರ ಒತ್ತಡಕ್ಕೆ ಮಣಿಯುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಒಂದು ವೇಳೆ ನಮ್ಮ ಮನವಿ ಪುರಸ್ಕಾರ ಮಾಡದೇ ಇದ್ದಲ್ಲಿ ನಾವು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಿದ್ದೇವೆ ಎಂದು ಎಚ್ಚರಿಸಿದರು.ಕೋಟ್ಯಂತರ ರುಪಾಯಿ ನೀರಲ್ಲಿ ಹೋಮ: ಫರೀದಾಬಾನು ನದೀಮುಲ್ಲಾ ಮಾತನಾಡಿ, ಮಟನ್, ಚಿಕನ್ ಹಾಗೂ ಮೀನು ಅಂಗಡಿಗಳಿಗಾಗಿಯೇ ಸ್ಥಳೀಯ ಪುರಸಭೆ ಕೋಟ್ಯಂತರ ವೆಚ್ಚ ಮಾಡಿ ಸಂತೆ ಮೈದಾನದಲ್ಲಿ ಮಳಿಗೆ ನಿರ್ಮಿಸಿದೆ. ಆದ್ದರಿಂದ ತಕ್ಷಣ ಕ್ರಮ ಕೈಗೊಂಡು, ಪಟ್ಟಣದ ವಿವಿಧ ಭಾಗಗಳಲ್ಲಿ ಇರುವ ಎಲ್ಲಾ ಮಟನ್, ಚಿಕನ್ ಹಾಗೂ ಮೀನು ಅಂಗಡಿಗಳನ್ನು ಸಂತೆ ಮೈದಾನದ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲು ಕ್ರಮ ಆಗ್ರಹಿಸಿದರು, ಈ ವೇಳೆ ಮಹೇಶ ಗಿರಣಿ ಲಕ್ಷಣ ಆಯನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.