ಸಾರಾಂಶ
ನರಗುಂದ: ಸದ್ಯ ಜಿಲ್ಲೆಯಲ್ಲಿ ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿರುವ ನರಗುಂದಕ್ಕೆ ಹೊಸ ರೈಲ್ವೆ ಮಾರ್ಗ ಪ್ರಾರಂಭಿಸಬೇಕೆಂದು ತಾಲೂಕು ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ರೈಲ್ವೆ ಸಚಿವರಿಗೆ ಮನವಿ ನೀಡಿ ಆಗ್ರಹಿಸಿದರು.
ಅವರು ಶ್ರೀ ಜಗನ್ನಾಥ್ ರಾವ್ ಜೋಷಿ ಮತ್ತು ಲಿ. ಎಫ್.ಎಮ್. ಹಸಬಿ ರೈಲ್ವೆ ಹೋರಾಟ ಕೇಂದ್ರ ಸಮಿತಿ ವತಿಯಿಂದ ಕುಷ್ಟಗಿಯಲ್ಲಿ ಹೊಸ ರೈಲ್ವೆ ಮಾರ್ಗದ ಉದ್ಘಾಟನೆಗೆ ಆಗಮಿಸಿದ ಕೇಂದ್ರ ಸರ್ಕಾರದ ರಾಜ್ಯ ಖಾತೆ ರೇಲ್ವೆ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿ ಕುಷ್ಟಗಿಯಿಂದ ನರಗುಂದ ಮಾರ್ಗವಾಗಿ ಘಟಪ್ರಭಾ ನೂತನ ರೈಲ್ವೆ ಮಾರ್ಗವನ್ನು ಮಂಜೂರು ಮಾಡಲು ಬೇಕಾದ ಸರ್ವೇ ಕಾರ್ಯವನ್ನು ತ್ವರಿತಗತಿಯಲ್ಲಿ ಪ್ರಾರಂಭಿಸಬೇಕೆಂದು ಮನವಿ ನೀಡಿ ಒತ್ತಾಯಿಸಿದರು.ಆನಂತರ ತಾಲೂಕು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಚನ್ನು ನಂದಿ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಈ ಭಾಗದ ಎಲ್ಲಾ ಶಾಸಕರು ಮತ್ತು ಸಂಸದರಿಗೆ, ರೈಲ್ವೆ ಇಲಾಖೆ ಅಧಿಕಾರಿಗಳಿಗೆ ನರಗುಂದಕ್ಕೆ ಹೊಸ ರೈಲ್ವೆ ಮಾರ್ಗ ಪ್ರಾರಂಭಿಸಬೇಕೆಂದು ಮನವಿ ನೀಡಲಾಗಿದೆ. ಆದ್ದರಿಂದ ರೈಲ್ವೆ ಸಚಿವರು ಈ ಭಾಗದ ಶಾಸಕರ ಮತ್ತು ಸಂಸದರು ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳ ಸಭೆಯನ್ನು ಕರೆದು ನೂತನ ರೈಲ್ವೆ ಮಾರ್ಗದ ಬಗ್ಗೆ ಚರ್ಚಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಮತ್ತು ಮೂರು ರಾಜ್ಯಗಳಾದ ಮಹಾರಾಷ್ಟ್ರ ಕರ್ನಾಟಕ ತೆಲಂಗಾಣ ಸಂಪರ್ಕ ಕೇಂದ್ರವಾಗಿದ್ದು, ಈ ಭಾಗದ ಸುಕ್ಷೇತ್ರ ಶ್ರೀ ರೇಣುಕಾ ಎಲ್ಲಮ್ಮ ದೇವಿಯ, ಶ್ರೀ ಗೊಡಚಿ ವೀರಭದ್ರೇಶ್ವರ, ರೋಣ ತಾಲೂಕಿನ ಇಟಿಗಿ ಶ್ರೀ ಭೀಮಾಂಬಿಕ ದೇವಿ ದರ್ಶನಕ್ಕೆ ಪ್ರತಿ ವರ್ಷ ಕೋಟ್ಯಾಂತರ ಭಕ್ತರು ಆಗಮಿಸುತ್ತಾರೆ. ಆದ್ದರಿಂದ ಕೇಂದ್ರ ಸರ್ಕಾರ ನರಗುಂದಕ್ಕೆ ಹೊಸ ರೈಲ್ವೆ ಮಾರ್ಗ ಪ್ರಾರಂಭ ಮಾಡಲು ಈ ಕೂಡಲೆ ಅನುಮೋದನ ನೀಡಲು ಸಚಿವ ವಿ. ಸೋಮಣ್ಣನವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಮನವಿ ಮಾಡಿಕೊಂಡರು. ರೈಲ್ವೆ ಖಾತೆಯ ರಾಜ್ಯ ಸಚಿವ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳ ಮನವಿ ಸ್ವೀಕರಿಸಿ ಈ ಬಗ್ಗೆ ಸಂಬಂಧ ಪಟ್ಟವರು ಜೊತೆ ಮಾತನಾಡಿ ಈ ಭಾಗದಲ್ಲಿ ಹೊಸ ರೈಲ್ವೆ ಮಾರ್ಗಕ್ಕೆ ಕ್ರಮ ತೆಗೆದುಕೊಳ್ಳಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳು ಇದ್ದರು.