ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕರ್ಣ
ಇಲ್ಲಿನ ಗಂಗಾವಳಿ-ಮಂಜುಗುಣಿ ನಡುವಣ ಸಂಪರ್ಕ ಕಲ್ಪಿಸುವ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಮೇಲೆ ಸರ್ಕಾರಿ ಎಲ್ಲಾ ಇಲಾಖೆಗಳ ವಾಹನಗಳು ಒಡಾಡುತ್ತಿದ್ದು, ಆದರೆ ಸಾರ್ವಜನಿಕರಿಗೆ ಅನುಕೂಲವಾಗುವ ಸಾರಿಗೆ ಸಂಸ್ಥೆಯ ಬಸ್ ಸಂಚಾರಕ್ಕೆ ಮಾತ್ರ ನಿರ್ಬಂಧ ಹಾಕಲಾಗಿದ್ದು, ಅಂತೂ ಇಂತು ಸಂಚಾರ ಆರಂಭಿಸಿದ ಒಂದು ಬಸ್ ಸಹ ರಾಜಕೀಯ ಹುಚ್ಚಾಟಕ್ಕೆ ಬಲಿಯಾಗಿ ಸಂಚಾರ ನಿಂತಿದೆ.ಕಳೆದ ಏಳು ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಈ ಸೇತುವೆ ಕಾಮಗಾರಿ ಆರೇಳು ತಿಂಗಳ ಹಿಂದೆ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿತ್ತು. ಪ್ರವಾಸಿ ತಾಣ ಗೋಕರ್ಣಕ್ಕೆ ಬರುವ ಗೋವಾ ಹಾಗೂ ಉತ್ತರ ಕರ್ನಾಟಕ ಭಾಗದ ಪ್ರವಾಸಿಗರಿಗೆ ಹತ್ತಿರದ ಮಾರ್ಗವಾದರೆ, ಸ್ಥಳೀಯರಿಗೆ ತಾಲೂಕಾ ಕೇಂದ್ರ ಬೆಸೆಯುವ ಸಮೀಪದ ಸಂಪರ್ಕ ರಸ್ತೆಯಾಗಿತ್ತು. ಸೇತುವೆ ಮೇಲೆ ಪ್ರಸ್ತುತ ನಿತ್ಯ ಸಾವಿರಾರು ಪ್ರವಾಸಿ ವಾಹನಗಳು, ಸರಕು ವಾಹನ, ಸರ್ಕಾರಿ ವಾಹನಗಳು ಸಂಚರಿಸುತ್ತಿದೆ. ಆದರೆ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಮಾತ್ರ ಇನ್ನೂ ಆರಂಭಿಸಿಲ್ಲ. ಗೋಕರ್ಣದಿಂದ ಅಂಕೋಲಾಕ್ಕೆ ನಿತ್ಯ ಸಂಚರಿಸುವ ಬಸ್ ಸುತ್ತಿ ಬಳಸಿ ತೆರಳುತ್ತಿದ್ದು, ಪ್ರತಿ ನಿತ್ಯ ಹಾದಿಯಲ್ಲಿ ಕೆಟ್ಟು ನಿಲ್ಲುತ್ತದೆ. ೨೫ ಕಿಮೀ ಮಾರ್ಗ ಕ್ರಮಿಸಲು ಒಂದು ತಾಸಿಗೂ ಅಧಿಕ ಸಮಯ ಬೇಕಾಗುತ್ತದೆ. ಆದರೆ ಗಂಗಾವಳಿಯ ಮಾರ್ಗದಲ್ಲಿ ಬಸ್ ತೆರಳಿದರೆ ಕೇವಲ ಅರ್ಧಗಂಟೆಯಲ್ಲಿ ತೆರಳಬಹುದಾಗಿದೆ.
ಹೀಗೆ ನಿತ್ಯ ಶಾಲಾ-ಕಾಲೇಜಿಗೆ ಹಾಗೂ ವಿವಿದ ಉದ್ಯೋಗಕ್ಕೆ ತೆರಳುವವರಿಗೆ ಅಗತ್ಯವಿರುವ ಈ ಮಾರ್ಗದಲ್ಲಿ ಇನ್ನೂ ಬಸ್ ಸಂಚಾರ ಆರಂಭಿಸದೆ ನಿರ್ಲಕ್ಷ ವಹಿಸಿದ್ದು, ನಿತ್ಯ ಜನರು ಪರದಾಡಬೇಕಿದೆ.ಶಾಸಕರು ಪ್ರಾರಂಭಿಸಿದ ಬಸ್ ಸಂಚಾರ ಸ್ಥಗಿತ:
ಕುಮಟಾ -ಹೊನ್ನಾವರ ವಿಧನಾಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಗಂಗಾವಳಿಯ ಒಂದು ಕಾರ್ಯಕ್ರಮಕ್ಕೆ ಬಂದಾಗ ಜನರು ಬಸ್ ಸಮಸ್ಯೆ ಬಗ್ಗೆ ಅಳಲು ತೊಡಿಕೊಂಡಿದ್ದರು, ತಕ್ಷಣ ಸ್ಪಂದಿಸಿದ ಶಾಸಕರು ಒಂದು ವಾರದೊಳಗೆ ಬಸ್ ವ್ಯವಸ್ಥೆ ಕಲ್ಪಿಸುತ್ತೇನೆ ಎಂದಿದ್ದರು. ಅದರಂತೆ ಕುಮಟಾದಿಂದ ಗೋಕರ್ಣಕ್ಕೆ ಬಂದು ಗಂಗಾವಳಿ ಮೂಲಕ ಅಂಕೋಲಾ, ಯಲ್ಲಾಪುರ ಹುಬ್ಬಳ್ಳಿ ಮಾರ್ಗವಾಗಿ ಗದಗ ತೆರಳುವ ಬಸ್‌ಗೆ ಚಾಲನೆ ನೀಡಿದ್ದರು. ಅಲ್ಲದೇ ನಿತ್ಯ ಲೋಕಲ್ ಬಸ್ ಸಂಚಾರಕ್ಕೂ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು. ಆದರೆ ಶಾಸಕರು ಪ್ರಾರಂಭಿಸಿದ ಗದಗ ಬಸ್ ಕಳೆದ ನಾಲ್ಕು ದಿನಗಳಿಂದ ಬಂದ ಆಗಿದ್ದು ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ಸೇತುವೆ ಕೇವಲ ಕುಮಟಾ ಕ್ಷೇತ್ರದ ಜನರಿಗೆ ಸಿಮೀತವಾಗದೆ ಅಂಕೋಲಾ ಕ್ಷೇತ್ರದ ಜನರಿಗೂ ಅಗತ್ಯವಿದೆ ಎಂಬುದನ್ನ ಜನಪ್ರತಿನಿಧಿಗಳು ಅರಿತು ಮತದಾರ ಮತದಾನ ಮಾಡಿ ಜನಪ್ರತಿನಿಧಿ ಆಯ್ಕೆ ಮಾಡಿರುವುದು ಜನರ ಸಮಸ್ಯೆಗೆ ಸ್ಪಂದಿಸಲು ಎಂಬುದನ್ನ ಅರಿಯಬೇಕು ಎಂದು ಆಡಿಕೊಳ್ಳುತ್ತಿದ್ದಾರೆ.ಈ ಬಗ್ಗೆ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಯವರನ್ನ ವಿಚಾರಿಸಿದಾಗ ಬಸ್ ಸಂಚರಿಸಲು ನಿಮಗೆ ನಾವು ಪರವಾನಿಗೆ ನೀಡಿಲ್ಲ ಎಂದು ಜಿಲ್ಲಾಡಳಿತದವರು ತಿಳಿಸಿದ್ದು, ಆದ್ದರಿಂದ ಸಂಚಾರ ಸ್ಥಗಿತಗೊಳಿಸಿದ್ದೇವೆ ಎಂದು ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))