ಕೂಡಲೇ ಸರ್ಕಾರ ಮೆಕ್ಕೆಜೋಳ ಮತ್ತು ಹೆಸರು ಕಾಳು ಖರೀದಿ ಮಾಡಲು ಮುಂದಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಮುಖಂಡರು ಎಚ್ಚರಿಸಿದರು.
ನರಗುಂದ: ಮೆಕ್ಕೆಜೋಳ ಹಾಗೂ ಹೆಸರು ಖರೀದಿ ಕೇಂದ್ರ ಆರಂಭಿಸಬೇಕೆಂದು ಆಗ್ರಹಿಸಿ ಜಿಲ್ಲಾ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಬಸವರಾಜ ಸಾಬಳೆ ನೇತೃತ್ವದಲ್ಲಿ ರೈತರು ಮನವಿ ಸಲ್ಲಿಸಿದರು.
ಗುರುವಾರ ಪಟ್ಟಣದ ಟಿಎಪಿಎಂಸಿಯ ಹೆಸರು ನೋಂದಣಿ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರರ ಮುಖಾಂತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿ ಮಾತನಾಡಿದರು.ತಾಲೂಕಿನ ರೈತರು ಮುಂಗಾರು ಹಂಗಾಮಿನಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆಯಾದ ಗೋವಿನಜೋಳ ಬೆಳೆದಿದ್ದರು. ಬೆಳೆ ಕಟಾವಿಗೆ ಬಂದ ಸಂದರ್ಭದಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಗಿತ್ತು. ಅಲ್ಪಸ್ವಲ್ಪ ಉಳಿದ ಬೆಳೆಯನ್ನು ಮಾರುಕಟ್ಟೆಗೆ ಮಾರಾಟ ಮಾಡಲು ಹೋದರೆ ಗೋವಿನಜೋಳ ಬೆಲೆ ದಿಢೀರ್ ಕುಸಿತವಾಗಿದೆ. ಆದ್ದರಿಂದ ಸರ್ಕಾರ ಗೋವಿನಜೋಳವನ್ನು ಬೆಂಬಲ ಬೆಲೆ ಕ್ವಿಂಟಲಿಗೆ ₹2400ರಂತೆ ಖರೀದಿಸಲು ಮುಂದಾಗಬೇಕು.
ಅದೇ ರೀತಿ ಹೆಸರು ಕಾಳು ಖರೀದಿಗೆ 1 ದಿನ ಕೇವಲ ಒಂದು ದಿನ ರೈತರ ನೋಂದಣಿ ಮಾಡಿದ್ದಾರೆ. ಬಳಿಕ ಸಾಫ್ಟವೇರ್ ಬಂದಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದರಿಂದ ರೈತರಿಗೆ ತೊಂದರೆಯಾಗಿದೆ. ಕೂಡಲೇ ಸರ್ಕಾರ ಮೆಕ್ಕೆಜೋಳ ಮತ್ತು ಹೆಸರು ಕಾಳು ಖರೀದಿ ಮಾಡಲು ಮುಂದಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಉಪತಹಸೀಲ್ದಾರ್ ಪರಶುರಾಮ ಕಲಾಲ ಅವರು ಮನವಿ ಸ್ವೀಕರಿಸಿದರು. ಮುಖಂಡರಾದ ಎಂ.ಎನ್. ಮುಳ್ಳೂರ, ಮನೋಹರ ಹುಯಿಲಗೋಳ, ಈರಮ್ಮ ಮೇಟಿ, ರವಿ ಒಡೆಯರ, ವೀರಣ್ಣ ಸೊಪ್ಪಿನ, ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನ, ಟಿಎಪಿಎಂಸಿ ವ್ಯವಸ್ಥಾಪಕ ವೈ.ಎಚ್. ಪಾಟೀಲ, ಸಹಕಾರಿ ಸಂಘದ ಅಧಿಕಾರಿ ಸಚಿನ ಪಾಟೀಲ ಇದ್ದರು.