ಸಾರಾಂಶ
ಕಾಲೇಜಿನಲ್ಲಿ ಕಲಾ, ವಾಣಿಜ್ಯ ಮತ್ತು ಶಿಕ್ಷಣ ವಿಭಾಗವಿದ್ದು, ವಿಜ್ಞಾನ ವಿಭಾಗದ ಕೊರತೆ ಇದೆ. ಪಿಯು ವಿಜ್ಞಾನ ವಿಭಾಗಕ್ಕೆ ನಗರ ಪ್ರದೇಶಗಳಿಗೆ ವಿದ್ಯಾರ್ಥೀಗಳು ಅಲೆದಾಡುವಂತಾಗಿದೆ
ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಅಕ್ಕಿ ಬಸಮ್ಮ ಸ್ಮಾರಕ ಪದವಿಪೂರ್ವ ಕಾಲೇಜ್‌ನಲ್ಲಿ ವಿಜ್ಞಾನ ವಿಭಾಗ ಮತ್ತು ಕಿಂಡರ್‌ಗಾರ್ಡನ ಶಾಲೆ ಆರಂಭಿಸುವಂತೆ ಒತ್ತಾಯಿಸಿ ಗ್ರಾಮದ ಮುಖಂಡರು ವಿ.ವೀ. ಸಂಘದ ಅಧ್ಯಕ್ಷ ಡಾ.ಕೆ. ಮಹಾಂತೇಶಗೆ ಮನವಿ ಸಲ್ಲಿಸಿದರು.
ಈ ಕುರಿತು ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿ, ತಂಬ್ರಹಳ್ಳಿಯಲ್ಲಿ ಕಳೆದ ೨೭ವರ್ಷಗಳ ಹಿಂದೆಯೇ ವಿವೀ ಸಂಘದಿಂದ ಪಿಯುಸಿ ಕಾಲೇಜು ಸ್ಥಾಪಿಸಲಾಗಿದೆ. ಸುತ್ತಲಿನ ಹಲವು ಗ್ರಾಮಗಳ ವಿದ್ಯಾರ್ಥಿಗಳಿಗೆ ಕಾಲೇಜು ಆಸರೆಯಾಗಿದೆ.ಆದರೆ, ಕಾಲೇಜಿನಲ್ಲಿ ಕಲಾ, ವಾಣಿಜ್ಯ ಮತ್ತು ಶಿಕ್ಷಣ ವಿಭಾಗವಿದ್ದು, ವಿಜ್ಞಾನ ವಿಭಾಗದ ಕೊರತೆ ಇದೆ. ಪಿಯು ವಿಜ್ಞಾನ ವಿಭಾಗಕ್ಕೆ ನಗರ ಪ್ರದೇಶಗಳಿಗೆ ವಿದ್ಯಾರ್ಥೀಗಳು ಅಲೆದಾಡುವಂತಾಗಿದೆ. ಅಲ್ಲದೆ ದುಬಾರಿ ವೆಚ್ಚ ಭರಿಸಲಾಗದೆ ಪ್ರತಿಭಾವಂತ ವಿದ್ಯಾರ್ಥಿಗಳು ಬೇರೊಂದು ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ೧೫೦ ವಿದ್ಯಾರ್ಥಿನಿಯರಿದ್ದಾರೆ.ಈ ಹಿನ್ನೆಲೆಯಲ್ಲಿ ಸುತ್ತಲಿನ ಗ್ರಾಮದ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿ ಈ ಸಾಲಿನಿಂದಲೇ ವಿಜ್ಞಾನ ವಿಭಾಗ ಆರಂಭಿಸಬೇಕು. ಬಹು ಬೇಡಿಕೆ ಹೊಂದಿರುವ ಕಿಂಡರ್ ಗಾರ್ಡನ್ ಶಾಲೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಮೈಲಾರ ಶಿವಕುಮಾರ, ತಾಪಂ ಮಾಜಿ ಸದಸ್ಯ ಪಿ.ಕೊಟ್ರೇಶ್, ವಿವೀ ಸಂಘದ ಸದಸ್ಯರಾದ ಟಿ.ಜಿ. ದೊಡ್ಡಬಸಪ್ಪ, ಗಂಗಾಧರ, ಪಿಕಾರ್ಡ್ ಮಾಜಿ ಉಪಾಧ್ಯಕ್ಷ ಪಟ್ಟಣಶೆಟ್ಟಿ ಸುರೇಶ್, ನಿವೃತ್ತ ಕಾರ್ಯದರ್ಶಿ ಡಿ.ಎಂ.ತೋಟಯ್ಯ, ರೈತ ಸಂಘದ ಗಡ್ಡಿ ನಿಂಗಪ್ಪ ಇದ್ದರು.