ಹಾವೇರಿ ತಾಲೂಕಿನ ಹಾವನೂರು ಶ್ರೀ ದ್ಯಾಮವ್ವದೇವಿ ಜಾತ್ರೆ ಜ. 23ರಿಂದ ಒಂದು ವಾರ ನಡೆಯಲಿದ್ದು, ಸಾವಿರಾರು ಪ್ರಾಣಿಬಲಿ ಕೊಡಲಾಗುತ್ತಿದೆ. ಪ್ರಾಣಿಗಳನ್ನು ಜಾತ್ರಾ ಸ್ಥಳಕ್ಕೆ ತೆಗೆದುಕೊಂಡು ಹೋಗದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಲ್ಲಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಮನವಿ ಮಾಡಿದ್ದಾರೆ.

ಹಾವೇರಿ: ತಾಲೂಕು ಹಾವನೂರ ಗ್ರಾಮದ ಶ್ರೀ ದ್ಯಾಮವ್ವದೇವಿ ಜಾತ್ರೆಯಲ್ಲಿ ಪ್ರಾಣಿಬಲಿ ತಡೆಯಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ದ್ಯಾಮವ್ವದೇವಿ ಜಾತ್ರೆ ಜ. 23ರಿಂದ ಒಂದು ವಾರ ನಡೆಯಲಿದ್ದು, ಸಾವಿರಾರು ಪ್ರಾಣಿಬಲಿ ಕೊಡಲಾಗುತ್ತಿದೆ. ಪ್ರಾಣಿಗಳನ್ನು ಜಾತ್ರಾ ಸ್ಥಳಕ್ಕೆ ತೆಗೆದುಕೊಂಡು ಹೋಗದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಲ್ಲಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಬೇಕು ಎಂದು ಹೇಳಿದರು.

ಕಳೆದ ಕೆಲವು ವರ್ಷಗಳಿಂದ ನಮ್ಮ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ನಿರಂತರ ಜಾಗೃತಿ ಹಾಗೂ ಹೋರಾಟದಿಂದ ಪ್ರಾಣಿಬಲಿ ಕಡಿಮೆಯಾಗಿದೆ. ಕರ್ನಾಟಕ ಪ್ರಾಣಿಬಲಿಗಳ ಪ್ರತಿಬಂಧಕ ಅಧಿನಿಯಮ, 1975ರ ತಿದ್ದುಪಡಿ ಕಾಯಿದೆ ಅನ್ವಯ 1955ರಲ್ಲಿ ಪ್ರಾಣಿ ಬಲಿ ಮುಕ್ತ ರಾಜ್ಯ ಎಂದು ಘೋಷಣೆ ಮಾಡಲಾಗಿದೆ. ಯಾವುದೇ ಮೂಕಪ್ರಾಣಿಗಳನ್ನು ಬಲಿ ಕೊಡುವಂತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಪ್ರಾಣಿಬಲಿ ಮುಕ್ತ ಜಾತ್ರೆ ನಡೆಸಲು ಕ್ರಮಕೈಗೊಳ್ಳಬೇಕಿದೆ. ದೇವಸ್ಥಾನದಿಂದ ಒಂದು ಕಿ.ಮೀ. ದೂರದಲ್ಲಿ ಪ್ರಾಣಿಬಲಿ ಮಾಡಬಹುದೇ ಎಂದು ಹಲವರು ಕೇಳುತ್ತಾರೆ. ಕಾನೂನು ಹಾಗೂ ಹೈಕೋರ್ಟ್ ಆದೇಶದ ಪ್ರಕಾರ ಎಲ್ಲಿಯೂ ಪ್ರಾಣಿಬಲಿ ಕೊಡುವಂತಿಲ್ಲ ಎಂದರು.

ಸಾರ್ವಜನಿಕರು ಕಾನೂನು ಪಾಲಿಸಬೇಕು. ಪ್ರಾಣಿಬಲಿ ಮುಕ್ತ ಜಾತ್ರೆ ಮಾಡಲು ಸಹಕರಿಸಬೇಕು. ದೇವಾಲಯಗಳು ವಧಾಲಯ ಆಗಬಾರದು. ಹಾವನೂರ ಜಾತ್ರೆಯಲ್ಲಿ ಕೋಣಗಳ ಬಲಿ ಆಗುತ್ತದೆ ಎಂಬ ಮಾಹಿತಿ ಇದೆ. ಯಾವುದೇ ಕಾರಣಕ್ಕೂ ಆಕಳು, ಎಮ್ಮೆ, ಹಸು, ಕೋಣ ಬಲಿ ಕೊಡುವಂತಿಲ್ಲ. ಈ ಕುರಿತು ಜಾತ್ರೆಯಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ಹಾವೇರಿ ಜಿಲ್ಲಾಡಳಿತ ಪ್ರಾಣಿಬಲಿ ತಡೆಯುವ ನಿಟ್ಟಿನಲ್ಲಿ ಇಚ್ಛಾಶಕ್ತಿ ತೋರುತ್ತಿಲ್ಲ. ಕಳೆದ ವರ್ಷ ರಾಣಿಬೆನ್ನೂರು ಗಂಗಾಜಲ ಚೌಡೇಶ್ವರಿ ದೇವಿ ಜಾತ್ರೆಯಲ್ಲಿ ನಾನು ಸ್ವತಃ ನಿಂತು ಜಾಗೃತಿ ಮೂಡಿಸಿದ್ದೆ. ಈ ಬಾರಿ ಪ್ರಾಣಿಬಲಿ ಆಗಿದೆ. ಜಾತ್ರೆಗೆ ಬಂದೋಬಸ್ತ್ ಒದಗಿಸುವ ಜಿಲ್ಲಾಡಳಿತ ಪ್ರಾಣಿಬಲಿ ತಡೆಯುತ್ತಿಲ್ಲ. ತಡೆಯದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದರು.

ರಾಜ್ಯದ ಧಾರ್ಮಿಕ ದತ್ತಿ ಇಲಾಖೆಗಳ ಅಧೀನದಲ್ಲಿ 37 ಸಾವಿರ ದೇವಾಲಯಗಳಿದ್ದು, 2 ಲಕ್ಷಕ್ಕೂ ಅಧಿಕ ದೇವಸ್ಥಾನಗಳಿವೆ. ಪ್ರತಿ ವರ್ಷ 1.50 ಕೋಟಿ ಪ್ರಾಣಿಗಳು ಬಲಿಯಾಗುತ್ತಿರುವುದು ವಿಪರ್ಯಾಸ. ಇನ್ನು ನನಗೆ ಹಿಂದು, ಮುಸ್ಲಿಂ ಯಾವುದೇ ವ್ಯತ್ಯಾಸ ಇಲ್ಲ. ಬಕ್ರೀದ್ ಹಬ್ಬದ ಸಂದರ್ಭದಲ್ಲಿಯೂ ಪ್ರಾಣಿಬಲಿ ನಿಷೇಧಕ್ಕೆ ಜಾಗೃತಿ ಮೂಡಿಸಿದ್ದೇನೆ. ಸಿಂದಗಿ ತಾಲೂಕಿನ ದರ್ಗಾದಲ್ಲೂ ಜಾಗೃತಿ ಮೂಡಿಸುತ್ತಿದ್ದೇನೆ. ಈ ಬಗ್ಗೆ ಎಲ್ಲರೂ ಸೇರಿ ಮೂಕಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕಿದೆ ಎಂದು ಕರೆ ನೀಡಿದರು.

ಮಹಿಳಾ ಸಂಚಾಲಕಿ ಸುನಂದಾದೇವಿ ಇದ್ದರು.ಪ್ರಾಣಿ ಬಲಿ ನಿಷೇಧಿಸಿ ಡಿಸಿ ಆದೇಶ: ಹಾವೇರಿ ತಾಲೂಕಿನ ಹಾವನೂರು ಗ್ರಾಮದಲ್ಲಿ ಜ. 23ರಿಂದ ಒಂದುವಾರ ನಡೆಯುವ ಹಾವನೂರು ಗ್ರಾಮದೇವಿ ಜಾತ್ರೆಯಲ್ಲಿ ಪ್ರಾಣಿ, ಪಕ್ಷಿ ಬಲಿ ನೀಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಆದೇಶಿಸಿದ್ದಾರೆ. ಹಾವನೂರು ಗ್ರಾಮದಲ್ಲಿ ಜ. 23ರಿಂದ ಒಂದು ವಾರದ ವರೆಗೆ ನಡೆಯುವ ಶ್ರೀ ಗ್ರಾಮದೇವತಾ ಜಾತ್ರೆ ವೇಳೆ ದೇವಸ್ಥಾನದ ಆವರಣ ಅಥವಾ ಗ್ರಾಮದ ವ್ಯಾಪ್ತಿಯಲ್ಲಿ ಭಕ್ತಾದಿಗಳು, ಸಾರ್ವಜನಿಕರು ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.