ದಲಿತರ ಮೇಲಿನ ದೌರ್ಜನ್ಯ ತಡೆಗೆ ಆಗ್ರಹ

| Published : Oct 08 2025, 01:01 AM IST

ಸಾರಾಂಶ

ಕೆ. ರಾಯಪುರ ಗ್ರಾಮದಲ್ಲಿ ಗೊಲ್ಲ ಸಮುದಾಯದವರಿಂದ ಮಾದಿಗ ಸಮುದಾಯದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಸಾಮಾಜಿಕ ಬಹಿಷ್ಕಾರಕ್ಕೆ ಒಳಪಟ್ಟು ಸಾಕಷ್ಟು ನೋವುಗಳು ಅನುಭವಿಸಿದರೂ ದೌರ್ಜನ್ಯ ಮಾತ್ರ ನಿಂತಿಲ್ಲ.

ಹೊಸಪೇಟೆ: ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕೆ. ರಾಯಪುರ ಗ್ರಾಮದಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಸಾಮೂಹಿಕ ಬಹಿಷ್ಕಾರ ಹಾಕಲಾಗುತ್ತಿದೆ. ಈ ಬಗ್ಗೆ ಐವರ ವಿರುದ್ಧ ದೂರು ನೀಡಿದರೂ ಇಬ್ಬರನ್ನು ಮಾತ್ರ ಪೊಲೀಸರು ಬಂಧಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿಲ್ಲ. ಮಾದಿಗ ಸಮಾಜದ ಮೇಲೆ ನಿರಂತರ ದೌರ್ಜನ್ಯ ನಡೆಸಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂದು ದಲಿತ ಸಂಘರ್ಷ ಸಮಿತಿ ವತಿಯಿಂದ ವಿಜಯನಗರ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪಗೆ ಮನವಿಪತ್ರ ಸಲ್ಲಿಸಿದರು.

ಕೆ. ರಾಯಪುರ ಗ್ರಾಮದಲ್ಲಿ ಗೊಲ್ಲ ಸಮುದಾಯದವರಿಂದ ಮಾದಿಗ ಸಮುದಾಯದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಸಾಮಾಜಿಕ ಬಹಿಷ್ಕಾರಕ್ಕೆ ಒಳಪಟ್ಟು ಸಾಕಷ್ಟು ನೋವುಗಳು ಅನುಭವಿಸಿದರೂ ದೌರ್ಜನ್ಯ ಮಾತ್ರ ನಿಂತಿಲ್ಲ. ಕೆ. ರಾಯಪುರ ಗ್ರಾಮದಲ್ಲಿ ರಸ್ತೆ, ಹೋಟೆಲ್, ದೇವಸ್ಥಾನಗಳಿಗೆ ಸಾಮಾಜಿಕ ಬಹಿಷ್ಕಾರವೆಸಗಿ ಕೊಲೆ ಬೆದರಿಕೆ ಒಡ್ಡಲಾಗುತ್ತಿದೆ. ಸಾಮಾಜಿಕ ಸಮಾನತೆ ಮತ್ತು ಅಸ್ಪೃಶ್ಯತೆ ನಿವಾರಣೆಯಲ್ಲಿ ಕೂಡ್ಲಿಗಿ ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ ಮತ್ತು ಕೂಡ್ಲಿಗಿ ತಹಸೀಲ್ದಾರ್ ರೇಣುಕಮ್ಮ ರಾಯಪುರ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದರು.

ಮುಖಂಡರಾದ ಹನುಮೇಶ್, ಎಸ್. ಪರಮೇಶ್, ಲೋಕೇಶ್, ನಾಗಸಮುದ್ರ ಮರಿಸ್ವಾಮಿ, ಎಂ. ರುದ್ರಯ್ಯ, ವಡೆರಹಳ್ಳಿ ಬಸವರಾಜ್, ರುದ್ರಪ್ಪ, ಓಬಣ್ಣ, ಶಿವಣ್ಣ, ಬಿ.ಕೆ. ಚಂದ್ರಣ್ಣ, ರಾಮಾಂಜನೇಯ, ಹನುಮಂತಪ್ಪ, ಭೀಮಪ್ಪ, ರಾಜು ಮತ್ತಿತರರಿದ್ದರು.