ಲಕ್ಷ್ಮೇಶ್ವರ: ತಾಲೂಕಿನಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆ ಪಟ್ಟಣದಲ್ಲಿ ಗೋಹತ್ಯೆ ನಡೆಯದಂತೆ ಅಧಿಕಾರಿಗಳು ಸೂಕ್ತ ಮುಂಜಾಗ್ರತೆ ವಹಿಸಬೇಕು ಎಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಬುಧವಾರ ಪಟ್ಟಣದ ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿ ಈರಣ್ಣ ಪೂಜಾರ ಹಾಗೂ ಗಂಗಾಧರ ಮೆಣಸಿನಕಾಯಿ ಅವರು ಮಾತನಾಡಿ, ಹಿಂದೂಗಳ ಪೂಜ್ಯನೀಯ ಭಾವನೆಯ ಗೋವನ್ನು ಹತ್ಯೆ ಮಾಡದಂತೆ ಸುಪ್ರೀಂಕೋರ್ಟ್ ಆದೇಶ ಇದ್ದರೂ ಕೆಲವರು ಗೋವುಗಳನ್ನು ಹತ್ಯೆ ಮಾಡುವುದು ಮತ್ತು ಅಕ್ರಮವಾಗಿ ಮಾಂಸ ಸಾಗಾಟ ಮಾಡುವುದು ನಿರಂತರವಾಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.ಇದು ಹಿಂದೂಗಳ ಭಾವನೆಗೆ ದಕ್ಕೆ ತರುತ್ತಿದೆ. ಆದ್ದರಿಂದ ಬಕ್ರೀದ್ ಹಬ್ಬದ ಹಿನ್ನೆಲೆ ಗೋಹತ್ಯೆ ನಡೆಯುವುದನ್ನು ತಡೆಯಬೇಕು ಎಂದು ಆಗ್ರಹಿಸಿದ ಅವರು, ಪಟ್ಟಣದ ಸೋಮೇಶ್ವರ ದೇವಾಲಯದ ಪಕ್ಕದಲ್ಲಿ ಇರುವ ಮಟನ್ ಮಾರ್ಕೆಟ್ ಸ್ಥಳಾಂತರ ಮಾಡಬೇಕು. ಕಳೆದ ಹಲವು ವರ್ಷಗಳಿಂದ ಮಟನ್ ಮಾರ್ಕೆಟ್ ಸ್ಥಳಾಂತರ ಮಾಡುವಂತೆ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿದರೂ ಪ್ರಯೋಜನವಾಗಿಲ್ಲ. ಒಂದು ವಾರದೊಳಗೆ ಮಟನ್ ಮಾರ್ಕೆಟ್ ಸ್ಥಳಾಂತರ ಮಾಡದೆ ಹೋದಲ್ಲಿ ಪುರಸಭೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ದುಂಡೇಶ ಕೋಟಗಿ, ವಿಜಯ ಕುಂಬಾರ, ಶಕ್ತಿ ಕತ್ತಿ, ವಿಶಾಲ ಬಟಗುರ್ಕಿ, ನವೀನ ಹಿರೇಮಠ, ಮಹಾಂತೇಶ ರಗಟಿ, ಅಮಿತ ಗುಡಗೇರಿ, ಉಳವೇಶಗೌಡ ಪಾಟೀಲ, ಸಂಗಮೇಶ ಬೆಳವಲಕೊಪ್ಪ, ಪ್ರಶಾಂತ ಗಾಂಜಿ, ಅಕ್ಷಯ ಕುಮಶಿ, ನಾಗರಾಜ ಪಾಟೀಲ, ಯಶವಂತ ಶಿರಹಟ್ಟಿ, ಹನುಮಂತ ರಾಮಗೇರಿ, ಯಶವಂತ ಬಳ್ಳಾರಿ, ಪ್ರವೀಣ್ ಹಗರದ, ಅರುಣಗೌಡ ಪಾಟೀಲ್, ಬಸವರಾಜ ಶಿರಬಡಗಿ, ಆದಿತ್ಯ ನರೇಗಲ್ಲ, ಚಂದ್ರು ನೀರಲಗಿ, ಗುದ್ನೇಪ್ಪ ಸೊಪ್ಪಿನ, ಕಲ್ಲನಗೌಡ ಪಾಟೀಲ, ವಿನಾಯಕ ಸಡಪಲ್ಲ, ಶರಣು ಗಾಂಜಿ, ವೆಂಕಟೇಶ ಕುಲಕರ್ಣಿ, ಆದೇಶ ಸವಣೂರ, ಪ್ರವೀಣ ಬಿಂಕದಕಟ್ಟಿ, ಸನತ್ ಸಪ್ಪಿನ, ಶಂಕರ ಬ್ಯಾಡಗಿ ಸೇರಿದಂತೆ ಅನೇಕರು ಇದ್ದರು.