ಸಿದ್ದಾಪುರ: ರಾಷ್ಟ್ರವ್ಯಾಪಿ ಗೋ ವಂಶ ಸಂರಕ್ಷಣಾ ಅಭಿಯಾನದ ಅಡಿಯಲ್ಲಿ ಗೋಹತ್ಯಾ ನಿಷೇಧ ಹಾಗೂ ದೇಶದಲ್ಲಿ ಗೋಮಾತೆಗೆ ವಿಶೇಷ ಸ್ಥಾನಮಾನ ಗೌರವ ಪ್ರಾಪ್ತಿಗಾಗಿ ಸಂತರ ನೇತೃತ್ವದಲ್ಲಿ ಗೋಮಾತಾ ಸಮ್ಮಾನ್ ಅಭಿಯಾನ ಆರಂಭವಾಗಿದ್ದು, ಶ್ರೀ ರಾಮಚಂದ್ರಾಪುರ ಮಠದ ನಿರ್ದೇಶನದಂತೆ ಸೋಮವಾರ ಸ್ಥಳೀಯ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಅವರ ಮೂಲಕ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ರಾಜ್ಯಪಾಲರು ಹಾಗೂ ರಾಜ್ಯದ ಮುಖ್ಯಮಂತ್ರಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.
ಗೋವಂಶದ ಕಳ್ಳಸಾಗಣೆ ತಡೆಯಬೇಕು, ಗೋ ಹತ್ಯೆಯನ್ನು ಜಾಮೀನುರಹಿತ ಅಪರಾಧ ವರ್ಗಕ್ಕೆ ಸೇರಿಸಬೇಕು. ಗೋವಿಗೆ ರಾಷ್ಟ್ರಮಾತೆ ಎಂಬ ಸಂವಿಧಾನಾತ್ಮಕ ಮಾನ್ಯತೆ ನೀಡಬೇಕು. ಗ್ರಾಪಂ ಮಟ್ಟದಲ್ಲಿ ನಂದಿಶಾಲೆ, ಜಿಲ್ಲಾ ಮಟ್ಟದಲ್ಲಿ ಗೋಶಾಲೆ, ಗೋ ಅಭಯಾರಣ್ಯ, ಗೋಮಾಳ ಸಂರಕ್ಷಣಾ ನೀತಿ, ಮೇವು ಭದ್ರತಾ ಕಾನೂನು, ಮೇವಿನ ಅಕ್ರಮ ಸಂಗ್ರಹಣೆ ಮತ್ತು ಅನಿಯಂತ್ರಿತ ಬೆಲೆ ತಡೆಗಟ್ಟುವಿಕೆ, ಗೋಮಾಳ ಅಭಿವೃದ್ಧಿ ಮಂಡಳಿಯಂತಹ ಕಾರ್ಯ ನಡೆಸುವಂತೆ ಮನವಿಯಲ್ಲಿ ಕೋರಲಾಗಿದೆ.ಮನವಿಯನ್ನು ಭಾನ್ಕುಳಿ ಶ್ರೀ ರಾಮದೇವಮಠ ಗೋಸ್ವರ್ಗದ ಗೌರವಾಧ್ಯಕ್ಷ ಆರ್.ಎಸ್. ಹೆಗಡೆ ಹರಗಿ, ಬಜರಂಗದಳದ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಭಾನ್ಕುಳಿ ಮಠದ ಅಧ್ಯಕ್ಷ ಎಂ.ಎಂ. ಹೆಗಡೆ ಮಗೇಗಾರ, ಸಿದ್ದಾಪುರ ಮಂಡಲ ಅಧ್ಯಕ್ಷ ಸತೀಶ ಆಲ್ಮನೆ, ವಲಯ ಅಧ್ಯಕ್ಷ ಎಸ್.ಜಿ. ಹೆಗಡೆ ಭತ್ತಗೆರೆ, ಭಾನ್ಕುಳಿಮಠ ಸಮಿತಿಯ ಚಂದನ ಶಾಸ್ತ್ರಿ ಇತರರು ಸಲ್ಲಿಸಿದರು.