ಹಿರಯೂರು ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿನ ಅಕ್ರಮ ಮದ್ಯ ಮಾರಾಟ ತಡೆಗಟ್ಟಿ ಎಂದು ಗ್ರಾಮಸ್ಥರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿನ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಿ ಗ್ರಾಮದ ಯುವಕರ ಜೀವ ಕಾಪಾಡಿ ಎಂದು ಮಲ್ಲಪ್ಪನಹಳ್ಳಿ ಗ್ರಾಮಸ್ಥರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನಾವಾದದ ಪದಾಧಿಕಾರಿಗಳೊಂದಿಗೆ ತಹಸೀಲ್ದಾರ್ ಎಂ. ಸಿದ್ದೇಶ್ ರವರಿಗೆ ಮನವಿ ಸಲ್ಲಿಸಿದರು.

ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ಅಧಿಕಾರಿಗಳ ಭಯವಿಲ್ಲದೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಯುವಕರು, ಮಕ್ಕಳು ಸಹ ಮದ್ಯ ವ್ಯಸನಿಗಳಾಗಿ ತಮ್ಮ ಸುಂದರ ಬದುಕನ್ನು ನರಕವನ್ನಾಗಿಸಿಕೊಳ್ಳುತ್ತಿದ್ದಾರೆ. ರಾತ್ರಿ 11 ಗಂಟೆಯದರೂ ಸಹ ಮದ್ಯ ವ್ಯಸನಿಗಳ ಮತ್ತು ಮದ್ಯ ಮಾರಾಟಗಾರರ ಹಾವಳಿ ನಿಲ್ಲುವುದಿಲ್ಲ. ಇದರಿಂದಾಗಿ ಗ್ರಾಮದ ಬಹುತೇಕ ಮನೆಗಳಲ್ಲಿ ನೆಮ್ಮದಿಯೇ ಇಲ್ಲದಂತಾಗಿದೆ. ಅಕ್ರಮ ಮದ್ಯ ಮಾರಾಟಗಾರರಿಗೆ ಅಕ್ರಮ ಮದ್ಯ ಮಾರಾಟ ನಿಲ್ಲಿಸಿ ಎಂದು ಹೇಳಲು ಹೋದರೆ ನಾವು ಯಾರಿಗೂ ಹೆದರುವುದಿಲ್ಲ. ದೂರು ಕೊಡುವುದಾದರೆ ಕೊಟ್ಟುಕೊಳ್ಳಿ ಎಂದು ಧಮ್ಕಿ ಹಾಕುತ್ತಾರೆ. ಆದ್ದರಿಂದ ಈ ಕೂಡಲೇ ಗ್ರಾಮದಲ್ಲಿನ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟಬೇಕು. ಇಲ್ಲವಾದಲ್ಲಿ ಸಂಘಟನೆಗಳ ಮುಖಂಡರುಗಳ ಜೊತೆಗೂಡಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಗ್ಗೆರೆ ಮಂಜುನಾಥ್ ಮಾತನಾಡಿ, ತಾಲೂಕಿನ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದೆ. ಅವರಿಗೆ ಯಾರ ಭಯವೂ ಇಲ್ಲದಂತಾಗಿದೆ. ಮದ್ಯ ವ್ಯಸನದಿಂದಾಗಿ ಹತ್ತಾರು ಅಪಘಾತಗಳಾಗುತ್ತಿವೆ. ಮದ್ಯ ಮಾರಾಟ ತಡೆಗಟ್ಟಿ ಎಂದು ಒಂದಿಲ್ಲೊಂದು ಹಳ್ಳಿಯವರು ಅಬಕಾರಿ ಇಲಾಖೆಗೆ, ತಹಸೀಲ್ದಾರ್ ಕಚೇರಿಗೆ ಮನವಿ ಮಾಡುತ್ತಲೇ ಇದ್ದಾರೆ. ಆದರೆ ಅಬಕಾರಿ ಇಲಾಖೆಯವರಿಗೆ ಅಕ್ರಮ ಮದ್ಯ ಮಾರಾಟ ತಡೆಗಟ್ಟುವಷ್ಟು ಪುರುಸೊತ್ತು ಇದ್ದಂತಿಲ್ಲ. ಇದು ಹೀಗೆಯೇ ಮುಂದುವರೆದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಈ ಮಂಜುನಾಥ್, ನಾಗೇಶ್ವರಿ, ಮೀನಾಕ್ಷಿ,ಲಕ್ಷ್ಮಿ, ಲಾವಣ್ಯ, ಚಂದನ,ರಘುನಾಥ, ಸಿದ್ದಗಂಗಮ್ಮ,ತಿಪ್ಪೇಸ್ವಾಮಿ, ಶಾಂತವೀರಮ್ಮ,ಕಿರಣ್, ಪಾಂಡುರಂಗಪ್ಪ ಮುಂತಾದವರು ಹಾಜರಿದ್ದರು.