ನಾಗಮಂಗಲದಲ್ಲಿ ಅಕ್ರಮ ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹ

| Published : May 29 2024, 12:45 AM IST

ಸಾರಾಂಶ

ಗಣಿಗಾರಿಕೆಯಲ್ಲಿ ನೀಡುತ್ತಿರುವ ಗುತ್ತಿಗೆ ವಿಚಾರದಲ್ಲಿ ವೆಂಕಟರಾಮು ಅವರಿಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸುವಂತೆ ಒತ್ತಾಯಿಸಿ ಸಂಬಂಧಪಟ್ಟವರಿಗೆ ಹಾಗೂ ಸಿಎಂ ಜನತಾದರ್ಶನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದ್ದರೂ ಇಲಾಖೆ ಅಧಿಕಾರಿಗಳು ಯಾವುದೇ ಕಾನೂನು ರೀತಿ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮೇ 31ರಂದು ನಾಗಮಂಗಲದಿಂದ ಮಂಡ್ಯ ಮಾರ್ಗವಾಗಿ ಬೆಂಗಳೂರಿನ ವಿಧಾನ ಸೌಧದವರೆಗೆ ಪಾದಯಾತ್ರೆ ನಡೆಸುತ್ತಿದ್ದೇನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಗಮಂಗಲ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಮೇ 31ರಂದು ಪಟ್ಟಣದಿಂದ ಬೆಂಗಳೂರಿನ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯವರೆಗೆ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ ಮುಖಂಡ ಗೋವಿಂದರಾಜು ತಿಳಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾಗಮಂಗಲದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ. ಇದನ್ನು ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿಗಳ ಜನತಾದರ್ಶನ ಕಾರ್ಯಕ್ರಮದಲ್ಲಿ ದೂರು ನೀಡಲಾಗಿತ್ತು. ಆದರೆ, ಈ ಸಂಬಂಧವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಗಣಿಗಾರಿಕೆಯಲ್ಲಿ ನೀಡುತ್ತಿರುವ ಗುತ್ತಿಗೆ ವಿಚಾರದಲ್ಲಿ ವೆಂಕಟರಾಮು ಅವರಿಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸುವಂತೆ ಒತ್ತಾಯಿಸಿ ಸಂಬಂಧಪಟ್ಟವರಿಗೆ ಹಾಗೂ ಸಿಎಂ ಜನತಾದರ್ಶನ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದ್ದರೂ ಇಲಾಖೆ ಅಧಿಕಾರಿಗಳು ಯಾವುದೇ ಕಾನೂನು ರೀತಿ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಮೇ 31ರಂದು ನಾಗಮಂಗಲದಿಂದ ಮಂಡ್ಯ ಮಾರ್ಗವಾಗಿ ಬೆಂಗಳೂರಿನ ವಿಧಾನ ಸೌಧದವರೆಗೆ ಪಾದಯಾತ್ರೆ ನಡೆಸುತ್ತಿದ್ದೇನೆ ಎಂದರು.

ನಾಗಮಂಗಲದ ವೆಂಕಟರಾಮು ಅವರಿಗೆ ಕಸಬಾ ಹೋಬಳಿ ಸಂಕನಹಳ್ಳಿ ಸರ್ವೇ ನಂಬರ್ 54ರಲ್ಲಿ ಟೆಂಡರ್ ಮೂಲಕ ಕಲ್ಲು ಗಣಿ ಗುತ್ತಿಗೆ ಮಾಡಲು ಜಾಗ ಮಂಜೂರಾಗಿದೆ. ತಹಸೀಲ್ದಾರರು ತಾಲೂಕು ಸರ್ವೆಯರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಜಂಟಿ ಸರ್ವೇ ನಡೆಸಿ ಸ್ಥಳವನ್ನು ಗುರುತು ಮಾಡಿದ್ದಾರೆ ಎಂದರು.

ಈ ಬಗ್ಗೆ ಕಳೆದ ಫೆಬ್ರವರಿಯಲ್ಲಿ ಅವರಿಗೆ ಗುತ್ತಿಗೆ ಪುಸ್ತಕವನ್ನೂ ನೀಡಿದ್ದಾರೆ. ಆದರೆ, ಕಾನೂನು ಪ್ರಕಾರ ನೋಂದಣಿ ಮಾಡಿಸಲು ಹೋದ ಸಂದರ್ಭದಲ್ಲಿ ಸಂಕನಹಳ್ಳಿ ಸರ್ವೇ ನಂಬರ್ 54 ಬ್ಲಾಕ್ ಆಗಿದೆ. ಇದರ ನಕಲನ್ನು ಪಡೆದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರ್ಜಿ ನೀಡಿ ಹಿಂಬರಹವನ್ನು ಪಡೆಯಲಾಗಿದೆ ಎಂದರು.

ಈ ದೂರನ್ನು ಹಿಂಪಡಿಯುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಒತ್ತಡ ಹಾಕಿ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಆದ್ದರಿಂದ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದೆ. ಪಾದಯಾತ್ರೆಯಲ್ಲಿ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆ ಹಾಗೂ ಅಖಿಲ ಕರ್ನಾಟಕ ಭೋವಿ ಕಲ್ಲು ಬಂಡೆ ಮಣ್ಣು ಮತ್ತು ಕಟ್ಟಡ ಕಾರ್ಮಿಕರ ವೇದಿಕೆ 40ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ದಕ್ಷಿಣ ಕರ್ನಾಟಕ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಜ್ವಲ್, ಮಂಜುನಾಥ ಇದ್ದರು.