ಚಿಂಚೋಳಿ: ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ

| Published : Feb 09 2024, 01:52 AM IST

ಸಾರಾಂಶ

ಹಸರಗುಂಡಗಿ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಅಕ್ರಮ ಮದ್ಯ ಸಾಗಾಟ ಮತ್ತು ಮಾರಾಟ ಹೆಚ್ಚಾಗುತ್ತಿದ್ದು, ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಬಡವರ ಮನೆಯಲ್ಲಿ ನೆಮ್ಮದಿ ಜೀವನ ಹಾಳಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಅಕ್ರಮ ಮದ್ಯ ಸಾಗಾಟ ಮತ್ತು ಮಾರಾಟ ಹೆಚ್ಚಾಗುತ್ತಿದ್ದು, ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಬಡವರ ಮನೆಯಲ್ಲಿ ನೆಮ್ಮದಿ ಜೀವನ ಹಾಳಾಗುತ್ತಿದೆ ಎಂದು ಆಕ್ರೋಶಪಡಿಸಿದ ಗ್ರಾಮಸ್ಥರು ಹಸರಗುಂಡಗಿ ಗ್ರಾಮದಿಂದ ಚಿಂಚೋಳಿ ಪಟ್ಟಣದಲ್ಲಿರುವ ಅಬಕಾರಿ ಇಲಾಖೆವರೆಗೆ ಪಾದಯಾತ್ರೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.

ಅಬಕಾರಿ ಇಲಾಖೆಯಿಂದ ಸನ್ನದು ಪಡೆದಿರುವ ಚಿಮ್ಮನಚೋಡ ಗ್ರಾಮದ ಹಲವು ಬಾರ್‌ಗಳಿಂದ ಅಕ್ರಮವಾಗಿ ಹಳ್ಳಿ ಹಳ್ಳಿಗೆ ಮದ್ಯ ಸಾಗಾಟ ಮಾಡುತ್ತಿದ್ದಾರೆ. ಇದರಿಂದಾಗಿ ಹಳ್ಳಿಯಲ್ಲಿ ಬಡವರ ನೆಮ್ಮದಿ ಜೀವನ ಹಾಳಾಗಿದೆ. ಯುವಕರು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನಕೊಡದೆ ಕುಡುಕರಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಗಿರಿಮಲ್ಲಪ್ಪ ಹಸರಗುಂಡಗಿ ಆಕ್ರೋಶವ್ಯಕ್ತಪಡಿಸಿದರು.

ಮಾರುತಿ ಗಂಜಗಿರಿ ಪ್ರತಿಭಟನೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ಸಹಾ ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಹಸರಗುಂಡಗಿ, ಚಿಮ್ಮನಚೋಡ, ದೋಟಿಕೊಳ್ಳ ಗ್ರಾಮಗಳಿಗೆ ಅಕ್ರಮ ಮದ್ಯಸಾಗಾಟ ಹೆಚ್ಚಾಗಿದೆ ಕೂಡಲೇ ಅಕ್ರಮ ಮದ್ಯಮಾರಾಟ ಸಾಗಾಟ ಮತ್ತು ಮಾರಾಟ ಮಾಡುವ ವೈನಶಾಪಗಳ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹಸರಗುಂಡಗಿ ಗ್ರಾಮದಿಂದ ಮರಪಳ್ಳಿ, ಗಾರಂಪಳ್ಳಿ, ಚಿಮ್ಮಇದಲಾಯಿ ಮೂಲಕ ಪಾದಯಾತ್ರೆಯಲ್ಲಿ ಗ್ರಾಮದ ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮುಖಂಡರಾದ ಕಾಶಿನಾಥ ಸಿಂಧೆ, ಗೋಪಾಲ ಪುಜಾರಿ, ವೀರಶೆಟ್ಟಿ, ಮಾಪಣ್ಣ, ಗೌತಮ, ನಿರ್ಮಲಾ, ಶಾಂತಕುಮಾರ, ಸೂರ್ಯಕಾಂತ ಇನ್ನಿತರರು ಭಾಗವಹಿಸಿದ್ದರು.