ಹೊಸಪೇಟೆ: ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸತತವಾಗಿ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕುಂಟುತ್ತ ಸಾಗಿರುವ ಹೆದ್ದಾರಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಕಳೆದ ಕೆಲ ತಿಂಗಳಿಂದ ರಾಷ್ಟ್ರೀಯ ಹೆದ್ದಾರಿ 50 ರಸ್ತೆಯ ಹೊಸಪೇಟೆ​ ಮರಿಯಮ್ಮನಹಳ್ಳಿ ನಡುವೆ ಇತ್ತೀಚೆಗೆ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿದ್ದು, ಈ ಮಾರ್ಗದಲ್ಲಿ ಸಂಚಾರ ಅಪಾಯಕರವಾಗಿದೆ. ಅದಿರು ಹೊತ್ತ ಸಾವಿರಾರು ಲಾರಿಗಳು ಸಂಚಾರ ನಿಯಮ ಗಾಳಿಗೆ ತೂರಿ ಅಡ್ಡಾದಿಡ್ಡಿಯಾಗಿ ಚಲಿಸುತ್ತಿರುವುದು ಪ್ರಮುಖ ಕಾರಣವಾಗಿದೆ. ಅಂತಹ ಲಾರಿ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗುಂಡಾ, ವ್ಯಾಸನಕೆರೆ, ಡಣಾಪುರ ಮತ್ತು ಮರಿಯಮ್ಮನಹಳ್ಳಿ ಭಾಗದಲ್ಲಿ ವಾಹನಗಳ ವೇಗವನ್ನು 20-40 ಕಿ.ಮೀ.ಗೆ ಮಿತಿಗೊಳಿಸಬೇಕು. ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಡ್ರೈವಿಂಗ್‌ ಲೈಸನ್ಸ್ ರದ್ದುಪಡಿಸಬೇಕು. ಹೆದ್ದಾರಿ ಬದಿಯ ಡಾಬಾಗಳಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳನ್ನು ಕಡಿವಾಣ ಹಾಕಬೇಕು ಎಂದರು.

ಬಿಎಂಎಂ ಕಾರ್ಖಾನೆಯ ಮುಂಭಾಗದಲ್ಲಿ ಹೆದ್ದಾರಿ ಕಾಮಗಾರಿ ಕೆಲ ತಿಂಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವುದು ಅಪಘಾಯಗಳಿಗೆ ಕಾರಣವಾಗುತ್ತಿದೆ. ಅರೆಬರೆ ಕಾಮಗಾರಿ ಮತ್ತು ಲಾರಿಗಳ ಅತಿವೇಗದಿಂದಾಗಿ ಅಮಾಯಕ ಸಾರ್ವಜನಿಕರ ಜೀವಗಳು ರಸ್ತೆಯಲ್ಲಿ ಬಲಿಯಾಗುತ್ತಿವೆ. ಕಾಮಗಾರಿಯನ್ನು ಹಗಲಿರುಳಾದರೂ ನಿರ್ವಹಿಸಿ, ಆದಷ್ಟು ಬೇಗ ಪೂರ್ಣಗೊಳಿಸಬೇಕು. ಕೂಡಲೇ ಜಿಲ್ಲಾಡಳಿತ ಮತ್ತು ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತುಕೊಂಡು ಸಿಸಿಟಿವಿ ಅಳವಡಿಕೆ ಹಾಗೂ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಕರುನಾಡ ಕಲಿಗಳ ಕ್ರಿಯಾ ಸಮಿತಿ ಮನವಿಯಲ್ಲಿ ಎಚ್ಚರಿಸಿದೆ.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಪಿ.ವೆಂಕಟೇಶ, ಉಪಾಧ್ಯಕ್ಷ ಗುಜ್ಜಲ ಗಣೇಶ್, ಪ್ರಧಾನ ಕಾರ್ಯದರ್ಶಿ ಎಂ.ದಾದಾ ಖಲಂದರ್, ಸಹ ಕಾರ್ಯದರ್ಶಿ ಮಂಜುನಾಥ, ಪ್ರಮುಖರಾದ ಎಸ್. ವಾದಿರಾಜ್, ರಾಮು, ಎಚ್.ಟಿ. ಶ್ಯಾಮ್ ಪಾಲ್, ರಜಾಕ್ ನಬಿಸಾಬ್, ಬಿ.ರಾಮ್, ಎಚ್.ಈರಣ್ಣ, ಸಿ.ಮರಿಸ್ವಾಮಿ, ಗುಂಡಿ ರಮೇಶ್, ಮೆಟ್ರಿ ಶ್ರೀನಿವಾಸ ವಕೀಲರು, ಬಿ.ಪಂಪಾಪತಿ ನಾಯಕ, ರಾಘವೇಂದ್ರ ಕಟ್ಟಿಮನಿ, ಎ.ಶೇಖರಪ್ಪ, ಎ.ಮರಿಯಪ್ಪ, ಎಸ್.ಖಾದರವಲಿ ಭಾಗವಹಿಸಿದ್ದರು.