ಸಾರಾಂಶ
ಭಟ್ಕಳ: ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯಕೀಯ ಸೇವೆಯಿಂದ ಜನತೆಗೆ ಅನುಕೂಲವಾಗಿದ್ದು, ಜನತೆಗೆ ಉತ್ತಮ ವೈದ್ಯಕೀಯ ಸೇವೆ ಮುಂದುವರಿಯಲು ವೈದ್ಯರ ವರ್ಗಾವಣೆ ತಡೆಯಬೇಕು ಎಂದು ನಾಗರಿಕ ಹಿತರಕ್ಷಣಾ ವೇದಿಕೆಯಿಂದ ರಾಜ್ಯದ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರನ್ನು ಆಗ್ರಹಿಸಲಾಯಿತು.
ಆರೋಗ್ಯ ಸಚಿವರು ಬುಧವಾರ ಮಂಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸತೀಶಕುಮಾರ ನಾಯ್ಕ, ಮಜ್ಲಿಸೆ ಇಸ್ಲಾಹ ವ ತಂಝೀಂ ಅಧ್ಯಕ್ಷ ಮತ್ತು ನಾಗರಿಕ ಹಿತರಕ್ಷಣಾ ಸಮಿತಿಯ ಪ್ರಮುಖ ಇನಾಯತುಲ್ಲಾ ಶಾಬಂದ್ರಿ ಮತ್ತಿತರರು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯಕೀಯ ಸೇವೆ ಮುಂದುವರಿಸಲು ಈಗಿರುವ ವೈದ್ಯರನ್ನು ಮುಂದುವರಿಸುವಂತೆ ಒತ್ತಾಯಿಸಿದರು.ಭಟ್ಕಳ ಸರ್ಕಾರಿ ಆಸ್ಪತ್ರೆ ದಾನಿಗಳ ಸಹಕಾರದಿಂದ ಸುಮಾರು ₹೫ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಹೊಂದಿದೆ. ಜಿಲ್ಲೆಯಲ್ಲೇ ಉತ್ತಮ ತಾಲೂಕು ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಜನತೆಗೆ ಉತ್ತಮ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಅನಿವಾಸಿ ಭಾರತೀಯರೊಬ್ಬರ ಸಹಕಾರದಿಂದ ₹೫೦ ಲಕ್ಷ ವೆಚ್ಚದಲ್ಲಿ ತುರ್ತು ನಿಗಾ ಘಟಕದ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಆಗಲು ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರ ಸತತ ಪ್ರಯತ್ನವಿದೆ. ಆಸ್ಪತ್ರೆಯಲ್ಲಿ ಐಸಿಯು ವ್ಯವಸ್ಥೆ ಉತ್ತಮವಾಗಿದ್ದು, ಡಾ. ಸವಿತಾ ಕಾಮತ್ ಮತ್ತು ಡಾ. ಲಕ್ಷ್ಮೀಶ ಅವರನ್ನು ವರ್ಗಾವಣೆ ಮಾಡಲಾಗಿದೆ. ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಅವರಿಬ್ಬರ ಸೇವೆ ಅಗತ್ಯವಾಗಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಸತೀಶಕುಮಾರ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ ಗುಂಡೂರಾವ್, ರಾಜ್ಯದಲ್ಲಿ ವೈದ್ಯರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಇದು ಮುಗಿದ ಬಳಿಕ ಈ ಬಗ್ಗೆ ಗಮನ ಹರಿಸುವುದಾಗಿ ಭರವಸೆ ನೀಡಿದರು.