ಹರಪನಹಳ್ಳಿ ಹಿಂದುಳಿದ ತಾಲೂಕಾಗಿದ್ದು, ಮೊದಲಿನಿಂದಲೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ

ಹರಪನಹಳ್ಳಿ: ತಾಲೂಕಿನಲ್ಲಿ ಬರ ಆವರಿಸಿರುವ ಈ ಸಂದರ್ಭದಲ್ಲಿ ಪಟ್ಟಣದ ಐತಿಹಾಸಿಕ ಹಿರೆಕೆರೆಯಿಂದ ಅಭಿವೃದ್ದಿ ನೆಪದಲ್ಲಿ ನೀರನ್ನು ಹೊರಗಡೆ ಬಿಡುತ್ತಿರುವುದು ಸಲ್ಲ, ಕೂಡಲೇ ಕೆರೆ ನೀರು ಪೋಲಾಗುವುದನ್ನು ಸ್ಥಗಿತಗೊಳಿಸಬೇಕು ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಇಲ್ಲಿಯ ಭಾರತೀಯ ಜನತಾ ಪಕ್ಷದ ಎರಡೂ ಬಣಗಳ ಮುಖಂಡರು ತಾಲೂಕಾಡಳಿತಕ್ಕೆ ಪ್ರತ್ಯೇಕವಾಗಿ ಒತ್ತಾಯಿಸಿದ್ದಾರೆ.

ಮಾಜಿ ಶಾಸಕ ಜಿ. ಕರುಣಾಕರರೆಡ್ಡಿ ಜತೆಗೆ ಗುರ್ತಿಸಿಕೊಂಡಿರುವ ಮುಖಂಡರು ಬಿಜೆಪಿ ಮಂಡಲ ಅಧ್ಯಕ್ಷ ಯಡಿಹಳ್ಳಿ ಶೇಖರಪ್ಪ ಹಾಗೂ ಆರ್. ಲೋಕೇಶ ನೇತೃತ್ವದಲ್ಲಿ ಹಿರೆಕೆರೆಗೆ ತೆರಳಿ ನೀರು ಹೊರಗಡೆ ಬಿಡುವ ಮೋಟಾರು ಹಾಗೂ ಪೈಪುಗಳ ಬಳಿ ನಿಂತು ಪ್ರತಿಭಟಿಸಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಕೂಡಲೇ ಕೆರೆಯಿಂದ ಹೊರಗಡೆ ನೀರು ಹರಿಸುತ್ತಿರುವುದನ್ನು ಸ್ಥಗಿತಗೊಳಿಸಿ ಯಂತ್ರ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಯಡಿಹಳ್ಳಿ ಶೇಖರಪ್ಪ, ಮುಖಂಡ ಆರ್.ಲೋಕೇಶ, ಮಾಜಿ ಕೌನ್ಸಿಲರ್‌ ಗಳಾದ ಕಿರಣ್ ಶಾನ್ ಬಾಗ್,ಗೌಳಿ ವಿನಯ,ಜಾವೇದ್ ಮುಖಂಡ ಕೆ.ಮಲ್ಲೇಶ, ವೆಂಕಟೇಶ, ರಾಘವೇಂದ್ರ, ಶಿವಕುಮಾರ, ಸಚಿನ್ ರೆಡ್ಡಿ, ಮಹೇಶ ಪೂಜಾರ ಇತರರು ಪಾಲ್ಗೊಂಡಿದ್ದರು.

ನಂಜನಗೌಡ ಬಣದಿಂದ ಸುದ್ದಿಗೋಷ್ಠಿ: ಬಿಜೆಪಿಯ ಇನ್ನೊಂದು ಬಣ ಮುಖಂಡ ಸಹಕಾರ ಸಂಘದ ರಾಜ್ಯ ಪ್ರಕೋಷ್ಠಕ ಜಿ.ನಂಜನಗೌಡ ನೇತೃತ್ವದಲ್ಲಿ ಕಾಯಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಸ್ತುತ ಸರಿಯಾದ ಮಳೆ ಇಲ್ಲದೆ ತುಂಗಭದ್ರಾ ಜಲಾಶಯ ಸಮರ್ಪಕವಾಗಿ ಭರ್ತಿಯಾಗಿಲ್ಲ. ಹರಪನಹಳ್ಳಿ ಹಿಂದುಳಿದ ತಾಲೂಕಾಗಿದ್ದು, ಮೊದಲಿನಿಂದಲೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ನೀರಿನ ಸಮಸ್ಯೆ ಇರಲಿಲ್ಲ. ಆದರೆ, ಈಗ ಅಭಿವೃದ್ಧಿಯ ನೆಪದಲ್ಲಿ ಕೆರೆಯ ನೀರನ್ನು ಹೊರಬಿಡಲಾಗುತ್ತಿದೆ. ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ, ಕೆರೆಯಲ್ಲಿನ ನೀರನ್ನು ಸಂರಕ್ಷಣೆ ಮಾಡಿಕೊಂಡು ಕಾಮಗಾರಿ ನಡೆಸಬೇಕು.

ನೀರು ಖಾಲಿ ಮಾಡಿ ಅಭಿವೃದ್ಧಿ ಮಾಡುವುದು ಅವೈಜ್ಞಾನಿಕ ಆಲೋಚನೆ ಹೀಗೆ ನೀರು ಹೊರ ಬಿಟ್ಟರೆ ನಗರಕ್ಕೆ ಸೇರಿದಂತೆ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನೀರು ಪೋಲಾಗುತ್ತಿರುವ ಕುರಿತು ಪ್ರಶ್ನಿಸಿದರೆ ಶಾಸಕರು ಅಸಮರ್ಪಕ ಉತ್ತರ ನೀಡಿದ್ದಾರೆ ಎಂದು ದೂರಿದ ಅವರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು.ನೀರು ವ್ಯರ್ಥವಾಗದಂತೆ ಸೂಕ್ತ ಕ್ರಮ ವಹಿಸಬೇಕು. ಒಂದೆರಡು ದಿನಗಳಲ್ಲಿ ನೀರು ಪೋಲಾಗುವುದನ್ನು ತಡೆಯದಿದ್ದರೆ ಬಿಜೆಪಿಯಿಂದ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮುಖಂಡ ಮಂಜುನಾಥ ಕಣಿವಿಹಳ್ಳಿ, ಡಾ. ರಮೇಶಕುಮಾರ,ಮೈದೂರು ಮಲ್ಲಿಕಾರ್ಜುನ, ಓಂಕಾರಗೌಡ, ಲಿಂಗಾನಂದ, ಪ್ರಾಣೇಶ, ರವಿಕುಮಾರ, ಪ್ರಭು ಶ್ಯಾನುಬೋಗ, ಸುರೇಶ, ದೇವರಾಜ, ಮಂಜುನಾಥ, ಜವಳಿ ಮಹೇಶ, ಅಕ್ಷಯ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.