ಜಮಖಂಡಿ ತಾಲೂಕಿನ ಕವಟಗಿ ಗ್ರಾಮದ ಬಳಿಯ ತುಬಚಿ-ಬಬಲೇಶ್ವರ ಏತ ನೀರಾವರಿಯಿಂದ ನೀರೆತ್ತಬಾರದು ಎಂದು ಆಗ್ರಹಿಸಿ ರೈತರು ಪ್ರತಿಭಟನೆಗೆ ಮುಂದಾದ ಘಟನೆ ಮಂಗಳವಾರ ನಡೆಯಿತು. ಮಳೆಗಾಲ ಸಮಯದಲ್ಲಿ ನದಿಯಿಂದ ಹರಿದುಹೋಗುವ ಹೆಚ್ಚಿನ ನೀರು ಸದುಪಯೋಗಪಡಿಸಿಕೊಳ್ಳಲು ಯೋಜನೆ ಪ್ರಾರಂಭಿಸಲಾಗಿದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ತಾಲೂಕಿನ ಕವಟಗಿ ಗ್ರಾಮದ ಬಳಿಯ ತುಬಚಿ-ಬಬಲೇಶ್ವರ ಏತ ನೀರಾವರಿಯಿಂದ ನೀರೆತ್ತಬಾರದು ಎಂದು ಆಗ್ರಹಿಸಿ ರೈತರು ಪ್ರತಿಭಟನೆಗೆ ಮುಂದಾದ ಘಟನೆ ಮಂಗಳವಾರ ನಡೆಯಿತು. ಮಳೆಗಾಲ ಸಮಯದಲ್ಲಿ ನದಿಯಿಂದ ಹರಿದುಹೋಗುವ ಹೆಚ್ಚಿನ ನೀರು ಸದುಪಯೋಗಪಡಿಸಿಕೊಳ್ಳಲು ಯೋಜನೆ ಪ್ರಾರಂಭಿಸಲಾಗಿದೆ. ಸಧ್ಯ ಬರ, ಮಳೆಯ ಕೊರತೆ ಕಾರಣ ನದಿಪಾತ್ರದಲ್ಲಿ ಕಡಿಮೆ ಪ್ರಮಾಣದ ನೀರಿನ ಸಂಗ್ರಹವಿದೆ. ಪ್ರಾದೇಶಿಕ ಆಯುಕ್ತರು ಕೃಷ್ಣಾ ನದಿಯಿಂದ 0.7 ಟಿಎಂಸಿ ನೀರನ್ನು ಬಬಲೇಶ್ವರ ಭಾಗಕ್ಕೆ ಹರಿಸಲು ಆದೇಶ ಹೊರಡಿದ್ದು, ಗೊಂದಲ ಉಂಟಾಗಿದೆ.

ರೈತ ಮುಖಂಡ ದರೆಪ್ಪ ದಾನಗೌಡ ಮಾತನಾಡಿ, ಸಚಿವ ಎಂ.ಬಿ. ಪಾಟೀಲರ ಪ್ರಭಾವ ಬಳಸಿಕೊಂಡು ತಮ್ಮ ಭಾಗದ ರೈತರಿಗೆ ನೀರೊದಗಿಸಲು ಮುಂದಾಗಿದ್ದಾರೆ. ಆದರೆ ನದಿಯಲ್ಲಿ ನೀರಿಲ್ಲದ ಪರಿಣಾಮ ನಮ್ಮ ಹಕ್ಕಿನ ನೀರನ್ನು ಹರಿಸಲು ಬಿಡುವುದಿಲ್ಲ. ರೈತರಲ್ಲೇ ಪರಸ್ಪರ ಜಗಳಕ್ಕೆ ಕಾರಣವಾಗುವ ಇಂತಹ ನಿರ್ಧಾರಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ್‌ ಅನೀಲ ಬಡಿಗೇರ, ಕೆಎನ್‌ಎನ್‌ಎಲ್‌ ಅಧಿಕಾಗಿಗಳು, ನೀರಾವರಿ ಅಧಿಕಾರಿಗಳು, ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ಅನೀಲ ಕುಂಬಾರ ಸೇರಿ ಅಧಿಕಾರಿಗಳ ತಂಡ ಕವಟಗಿ, ಗಲಗಲಿ ಬ್ಯಾರೇಜ್‌ ಮುಂತಾದ ಕಡೆಗಳಿಗೆ ರೈತರ ನಿಯೋಗ ದೊಂದಿಗೆ ತೆರಳಿ ನೀರಿನ ಲಭ್ಯತೆಯ ಕುರಿತು ಪರಿಶೀಲನೆ ನಡೆಸಿದರು.

ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ನದಿಪಾತ್ರದ ರೈತರ ಅಭಿಪ್ರಾಯ ಹಾಗೂ ನೀರು ಹರಿಸಲು ಆಗ್ರಹಿಸುತ್ತಿರುವ ಬಬಲೇಶ್ವರ ಭಾಗದ ರೈತರ ಬೇಡಿಕೆಗಳ ಕುರಿತು ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಿ ವರದಿಯ ನಂತರ ಬರುವ ಆದೇಶಗಳ ಪಾಲನೆ ಮಾಡುವುದಾಗಿ ಸಮಜಾಯಿಸಿ ನೀಡಿದರು.

ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಅನೀಲ ಬಡಿಗೇರ ಅವರು ಮಾತನಾಡಿ, ನೀರಿನ ಲಭ್ಯತೆ, ಇಲ್ಲಿರುವ ಸಮಸ್ಯೆಯ ಕುರಿತು, ನೀರಾವರಿ ಇಲಾಖೆ ಇಂಜಿನಿಯರಿಂಗ್‌ ವಿಭಾಗದಿಂದ ತಾಂತ್ರಿಕ ವರದಿ ಪಡೆದು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ಮನವರಿಕೆ ಮಾಡಿಕೊಟ್ಟರು.

ರೈತ ಮುಖಂಡರಾದ ಸುರೇಶ ಹಂಚಿನಾಳ, ಸಿದ್ದನಗೌಡ ಪಾಟೀಲ, ಮಹದೇವ ಮೂಡಲಗಿ, ವಕೀಲ ಸಿ.ಟಿ. ಉಪಾಧ್ಯಾಯ, ಪ್ರಶಾಂತ ಜಮಖಂಡಿ ಇತರರು ಮಾತನಾಡಿದರು.

ಮಹೇಶ ಕಂಕಣವಾಡಿ, ಕುಮಾರ ಹವಾಲ್ದಾರ, ರವಿ ಐಗಳಿ, ಕಲ್ಲಪ್ಪಬಿದರಿ, ಸದಾಶಿವ ಕಲೂತಿ, ಮಲ್ಲಪ್ಪ ಚಾಮೊಜಿ, ಅಣ್ಣುಗೌಡ ಪಾಟೀಲ, ಸಂದಿಪಗೌಡ ಪಾಟೀಲ, ಬಸವರಾಜ ಬಿರಾದಾರ. ಸದಪ್ಪ ಮಂಟೂರ, ಭೀಮು ಸೊನ್ನದ, ಸಾಬು ಗಲಗಲಿ, ಪ್ರಶಾಂತ ಕರೆ ಶ್ರೀಶೈಲ ಮೈಗೂರ ಸೇರಿದಂತೆ ನೂರಾರು ರೈತರು ಇದ್ದರು. ಸಾವಳಗಿ ಪಿಎಸ್‌ಐ ಅಣ್ಣಪ್ಪ ಐಗಳಿ, ಗ್ರಾಮೀಣ ಪಿಎಸ್‌ಐ ಮನ್ನಿಕೇರಿ ಹಾಗೂ ಸಿಬ್ಬಂದಿ ಬಿಗಿ ಬಂದೋಬಸ್ತ್‌ ಏರ್ಪಡಿಸಿದ್ದರು.

ಕೃಷ್ಣಾ ನದಿಯಿಂದ ನೀರೆತ್ತುವುದಾದರೆ ಮಹರಾಷ್ಟ್ರದ ಕೊಯಿನಾ ಡ್ಯಾಮ್‌ ನಿಂದ ನೀರು ಬಿಡಿಸಿ ಹೆಚ್ಚಿನ ನೀರನ್ನು ಬಬಲೇಶ್ವರ ಭಾಗಕ್ಕೆ ಹರಿಸಬೇಕು, ಸದ್ಯ ಪರಿಸ್ಥಿತಿಯಲ್ಲಿ ನೀರೆತ್ತುವುದು ಅವೈಜ್ಞಾನಿಕ ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಹೋಗುವ ಸಂದರ್ಭದಲ್ಲಿ ತುಬಚಿ ಬಬಲೇಶ್ವರ ಏತ ನೀರಾವರಿಯಿಂದ ನೀರು ಸಂಗ್ರಹಿಸಿಕೊಳ್ಳಬೇಕು. ಆಲಮಟ್ಟಿಯಲ್ಲಿ 524 ಮೀ. ನೀರು ಸಂಗ್ರಹವಿರುವ ಸಂದರ್ಭದಲ್ಲಿ ಈ ಯೋಜನೆಯಿಂದ ನೀರೆತ್ತಬಹುದು. ಎಲ್ಲ ರೈತರು ಒಂದೇ, ರೈತರ ಮಧ್ಯೆ ಜಗಳಕ್ಕೆ ಹಚ್ಚುವ ಕೆಲಸಕ್ಕೆ ಪ್ರಭಾವಿಗಳು ಮುಂದಾಗಬಾರದು. ನಮ್ಮ ತಟ್ಟೆಯ ಊಟ ಕಸಿದು ಇನ್ನೊಬ್ಬರಿಗೆ ನೀಡುವುದು ನ್ಯಾಯವಲ್ಲ. ಬರಗಾಲದಿಂದ ನದಿಯಲ್ಲಿ ನೀರಿಲ್ಲದ ಸಮಯದಲ್ಲಿ ನೀರು ಹರಿಸಬಾರದು

- ಡಾ.ಅಜಯ ಕುಲಕರ್ಣಿ ರೈತ ಮುಖಂಡ ಹಿರೇಪಡಸಲಗಿ

ಆಲಮಟ್ಟಿ ಜಲಾಶದಲ್ಲಿ 524 ಮೀ.ನೀರು ಸಂಗ್ರಹಸಿದ ಬಳಿಕ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಪ್ರಾರಂಭಿಸಬೇಕು ಎಂದಿದೆ. ಸದ್ಯ ಬರಗಾಲ ಹಾಗೂ ನದಿಯಲ್ಲಿ ನೀರಿಲ್ಲದ ಕಾರಣ ಬೇಸಿಗೆಯಲ್ಲಿ ನೀರು ಹರಿಸುವುದು ಸರಿಯಾದ ಕ್ರಮವಲ್ಲ. ಗಲಗಲಿ ಬಳಿಯ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಪ್ರಾರಂಭವಾಗಿಲ್ಲ. ತಾಲುಕು ಆಡಳಿತದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಹಾಗೂ ಈ ಭಾಗದ ರೈತರಿಗೆ ಅನ್ಯಾಯವಾಗದಂತೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ. ಪ್ರಭಾವ ಬಳಸಿ ನೀರು ಹರಿಸಲು ಮುಂದಾದರೇ ನದಿ ಪಾತ್ರದ ರೈತರು ಹೋರಾಟದ ಹಾದಿ ಹಿಡಿಯುವದು ಅನಿವಾರ್ಯ ವಾಗುತ್ತದೆ.

- ಮಹೇಶ ದೇಶಪಾಂಡೆ ರೈತ ಮುಖಂಡ ಹಿರೇಪಡಸಲಗಿ