ಹರಪನಹಳ್ಳಿ: ದೇಶದ ಬಡ ಮಧ್ಯಮ ವರ್ಗದವರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುವ ವಿಬಿ ಜಿ ರಾಮ್ ಜಿ ಮಸೂದೆಯನ್ನು ಕೂಡಲೇ ವಾಪಸ್ ಪಡೆಯಲು ಆಗ್ರಹಿಸಿ ಸಿಪಿಐ(ಎಂಎಲ್) ಲಿಬರೇಶನ್ ಹಾಗೂ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.ಕೇಂದ್ರದ ಬಿಜೆಪಿ ಸರ್ಕಾರ ಎಂಎನ್‌ಪಿ (ನ್ಯಾಶನಲ್ ಮಾನಿಟೈಜೇಶನ್ ಪೈಪ್‌ಲೈನ್) ಮೂಲಕ ಸಾರ್ವಜನಿಕ ಉದ್ದಿಮೆ, ಸಂಸ್ಥೆಗಳನ್ನು ಬಂಡವಾಳಿಗರಿಗೆ ಹರಾಜು ಹಾಕಿ ಸಾರ್ವಜನಿಕ ಸ್ವತ್ತುಗಳನ್ನು ಬಿಕರಿ ಮಾಡಿದ್ದಲ್ಲದೇ ಈಗ ದೇಶದ ಬಡವರು, ಮಧ್ಯಮ ವರ್ಗದವರಿಗೆ ಆಸರೆಯಾಗಿದ್ದ ನರೇಗಾ ಯೋಜನೆಯನ್ನು ಬದಲಿಸಿ ವಿಬಿ-ಜಿ ರಾಮ್ ಜಿ ಮಸೂದೆಯನ್ನು ಜಾರಿಗೆ ತರುವ ಮೂಲಕ ಉದ್ಯೋಗದ ಹಕ್ಕನ್ನು ಕಸಿದುಕೊಂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮಹಾತ್ಮಗಾಂಧಿ ಹೆಸರನ್ನು ಬದಲಿಸಿ ದುರುದ್ದೇಶದಿಂದ ಸಂಘ ಪರಿವಾರದ ಮನಸ್ಥಿತಿಯಿಂದ ಬಿಜೆಪಿ ಸರ್ಕಾರ ಮಸೂದೆಯ ಹೆಸರನ್ನು ಬದಲಿಸಿದೆ. ಕೂಡಲೇ ಈ ನಿರ್ಧಾರ ವಾಪಸ್ ಪಡೆದು, ಮೊದಲಿನ ಹೆಸರಿನಲ್ಲಿಯೇ ಯೋಜನೆ ಮುಂದುವರಿಸಬೇಕು. ₹86 ಸಾವಿರ ಕೋಟಿ ಹಣವನ್ನು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ನಿಗದಿಪಡಿಸಿದ್ದು, ಮುಂಬರುವ 2026-27ನೇ ಸಾಲಿನ ಬಜೆಟ್‌ನಲ್ಲಿ ₹2 ಲಕ್ಷ ಕೋಟಿ ನಿಗದಿ ಪಡಿಸಬೇಕು ಎಂಬ ಬೇಡಿಕೆಗಳುಳ್ಳ ಮನವಿಯನ್ನು ಅವರು ತಹಶೀಲ್ದಾರ ಬಿ.ವಿ. ಗಿರೀಶಬಾಬು ಅವರಿಗೆ ಸಲ್ಲಿಸಿದರು.ರಾಜ್ಯ ಕಾರ್ಯದರ್ಶಿಎಸ್.ಪರಶುರಾಮ, ಜಿಲ್ಲಾ ಕಾರ್ಯದರ್ಶಿ ಹುಲಿಕಟ್ಟಿ ಮೈಲಪ್ಪ, ತಾಲೂಕು ಕಾರ್ಯದರ್ಶಿ ಮಂಗಳಮ್ಮ ಪಾಲ್ಗೊಂಡಿದ್ದರು.
ಹರಪನಹಳ್ಳಿಯಲ್ಲಿ ವಿಬಿ ಜಿ ರಾಮ್ ಜಿ ಮಸೂದೆ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸಿಪಿಐ(ಎಂಎಲ್) ಲಿಬರೇಶನ್, ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.