ಸಮರ್ಪಕ ಬಸ್ ಸೌಕರ್ಯಕ್ಕೆ ಆಗ್ರಹಿಸಿ ಮುತ್ತಿಗೆ

| Published : May 06 2025, 12:16 AM IST

ಸಾರಾಂಶ

ಸುರಕ್ಷತೆ ಇಲ್ಲದ ಪ್ರಯಾಣಕ್ಕಾಗಿ ನಾವೆಲ್ಲರೂ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡ ಬೇಕಾಗಿದೆ

ಬ್ಯಾಡಗಿ: ತಾಲೂಕಿನ ಛತ್ರ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮದ ನೂರಾರು ಜನರು ಸೋಮವಾರ ಘಟಕ ವ್ಯವಸ್ಥಾಪಕರಿಗೆ ತಾಪಂ ಆವರಣದಲ್ಲಿ ಹಠಾತ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಛತ್ರ ಗ್ರಾಮ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವುದೇನೂ ನಿಜ ಆದರೆ ಅಲ್ಲಿನ ಜನರಿಗೆ ಮಾತ್ರ ಬಸ್ ವ್ಯವಸ್ತೆ ಮರೀಚಿಕೆಯಾಗಿದ್ದು, ಸುರಕ್ಷತೆ ಇಲ್ಲದ ಪ್ರಯಾಣಕ್ಕಾಗಿ ನಾವೆಲ್ಲರೂ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡ ಬೇಕಾಗಿದೆ ಎಂದು ಆರೋಪಿಸಿದರು.

ಅಧಿಕಾರಿಗಳ ಮಲತಾಯಿ ಧೋರಣೆ: ಕಳೆದೊಂದು ದಶಕದಿಂದ ಗ್ರಾಮಕ್ಕೆ ಬಸ್ ಬಿಡದೇ ಸಾರಿಗೆ ಘಟಕದ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ, ಇಲ್ಲಿರುವ ಬಡವರು ಅವರ ಗಮನಕ್ಕೆ ಬರುತ್ತಿಲ್ಲ, ಗ್ರಾಮದ ಬಹುತೇಕ ಸಾವಿರಕ್ಕೂ ಹೆಚ್ಚು ಜನರು ಬ್ಯಾಡಗಿ ಮಾರುಕಟ್ಟೆಗೆ ಕೆಲಸ ಮಾಡಲು ಬರುತ್ತಾರೆ ಹೀಗಿದ್ದರೂ ಸಹ ನಮ್ಮ ಬೇಡಿಕೆ ಈಡೇರಿಸಲು ಸಿದ್ಧರಿಲ್ಲ ಎಂದು ಆರೋಪಿಸಿದರು.

ಇದ್ದ ಒಂದು ಬಸ್ ಕೂಡ ಸ್ಥಗಿತ: ಕಾಟಾಚಾರಕ್ಕೆ ಎನ್ನುವಂತೆ ಬಿಟ್ಟಿದ್ದಂತಹ ಒಂದು ಬಸ್‌ನ್ನು ಸಹ ಯಾವುದೇ ಮುನ್ಸೂಚನೆ ನೀಡದೇ ಸ್ಥಗಿತಗೊಳಿಸಿದ್ದಾರೆ, ಈ ಮೊದಲು ಸದರಿ ಬಸ್ 6 ಟ್ರಿಪ್ ಓಡಾಡುತ್ತಿತ್ತು, ಕಾರಣ ಕೇಳಿದ್ದಕ್ಕೆ ಹಾರಿಕೆ ಉತ್ತರ ನೀಡುತ್ತಿರುವ ಅಧಿಕಾರಿಗಳು ಛತ್ರ ಗ್ರಾಮವೆಂದರೆ ಅಸಡ್ಡೆ ತೋರುತ್ತಿದ್ದಾರೆ ಎಂದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ದಿನಕ್ಕೆ ಒಟ್ಟು 19 ಎಕ್ಸ್ಪ್ರೆಸ್ ಬಸ್‌ಗಳು ನಿಲುಗಡೆಯಾಗುತ್ತಿದ್ದವು. ಆದರೆ ಫೈಓವರೆ ಕಾಮಗಾರಿ ಪೂರ್ಣಗೊಂಡ ಬಳಿ ಸದರಿ ಬಸ್‌ಗಳು ನಾಪತ್ತೆಯಾಗಿವೆ, ಬಸ್ ಹತ್ತಿ ಟಿಕೆಟ್ ಕೇಳಿದರೆ ಛತ್ರ ಗ್ರಾಮದ ಸ್ಟೇಜ್ ಇರುವುದಿಲ್ಲ ಹೀಗಾಗಿ ನಿಲುಗಡೆ ಕೊಡಲು ಸಾಧ್ಯವಿಲ್ಲ ಕಾಕೋಳ ಗ್ರಾಮಕ್ಕೆ ಇಳಿಯುವಂತೆ ಕಂಡಕ್ಟರ್ ಗಳು ಸಲಹೆ ನೀಡುತ್ತಾರೆ ಇದಕ್ಕಾಗಿ ಸಾರಿಗೆ ಅಧಿಕಾರಿಗಳ ಜೊತೆ ಸಂಘರ್ಷಕ್ಕಿಳಿಯಬೇಕಾಗಿದೆ ಎಂದರು.

ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಸಾರಿಗೆ ಅಧಿಕಾರಿಗಳು ಗ್ರಾಮಸ್ಥರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆದರು. ಈ ಸಂದರ್ಭದಲ್ಲಿ ಮಹಿಳೆಯರು ಸೇರಿದಂತೆ ಗ್ರಾಮದ ನೂರಾರು ಜನರು ಉಪಸ್ಥಿತರಿದ್ದರು.