ಸಾರಾಂಶ
ಕೇಂದ್ರದ ಮಂತ್ರಿಗಳ ಅಸಹ್ಯ ನಡವಳಿಕೆ ಇದು ಬಿಜೆಪಿ ಕೆಡಕಿನ ಸೂಚನೆಯಾಗಿದೆ. ಇಂತಹ ಸಣ್ಣ ಮನುಷ್ಯ ಕ್ಯಾಬಿನೆಟ್ ನಲ್ಲಿ ಸಚಿವರಾಗಿ ಕರ್ತವ್ಯ ನಿರ್ವಹಿಸಲು ಯೋಗ್ಯರಾಗಿರುವುದಿಲ್ಲ,
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅವಹೇಳನಕಾರಿಯಾಗಿ ಮಾತಾಡಿರುವುದನ್ನು ಖಂಡಿಸಿ ಹಾಗೂ ಅಮಿತ್ ಶಾಅವರನ್ನು ಸಂಸದರ ಸ್ಥಾನದಿಂದ ವಜಾಗೊಳಿಸಿ ದೇಶದ್ರೋಹ ಕಾಯ್ದೆಯಡಿ ಬಂಧಿಸುವಂತೆ ಒತ್ತಾಯಿಸಿ ಆದಿ ಕರ್ನಾಟಕ ಜನಾಂಗ, ಸಿದ್ದಪ್ಪಾಜಿ ರಸ್ತೆ ಗ್ರಾಮಸ್ಥರು ಮಂಗಳವಾರ ಪ್ರತಿಭಟಿಸಿದರು.
ಆದಿ ಕರ್ನಾಟಕ ಜನಾಂಗದ ಗ್ರಾಮಸ್ಥರು ಪ್ರತಿಭಟನೆಯ ಅಂಗವಾಗಿ ಪಟ್ಟಣದ ಹುಣಸೂರು- ಬೇಗೂರು ರಸ್ತೆಯಲ್ಲಿ ಕೇಂದ್ರದ ಮಂತ್ರಿ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅಮಿತ್ ಶಾ ಅವರ ಪ್ರತಿಕೃತಿ ದಹನ ಮಾಡಿ ನಂತರ ಮಿನಿ ವಿಧಾನಸೌಧದಲ್ಲಿ ಪ್ರತಿಭಟಿಸಿದರು.ಚಾ. ನಂಜುಂಡ ಮೂರ್ತಿ ಮಾತನಾಡಿ, ಕೇಂದ್ರದ ಮಂತ್ರಿಗಳ ಅಸಹ್ಯ ನಡವಳಿಕೆ ಇದು ಬಿಜೆಪಿ ಕೆಡಕಿನ ಸೂಚನೆಯಾಗಿದೆ. ಇಂತಹ ಸಣ್ಣ ಮನುಷ್ಯ ಕ್ಯಾಬಿನೆಟ್ ನಲ್ಲಿ ಸಚಿವರಾಗಿ ಕರ್ತವ್ಯ ನಿರ್ವಹಿಸಲು ಯೋಗ್ಯರಾಗಿರುವುದಿಲ್ಲ, ಆದ್ದರಿಂದ ಬಿಜೆಪಿ ಕೂಡಲೇ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕು ಎಂದರು.
ಪ್ರತಿಭಟನಾಕಾರರು ಪಟ್ಟಣದ ಸಿದ್ದಪ್ಪಾಜಿ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ತದನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ರಾಷ್ಟ್ರಪತಿಗಳಿಗೆ ತಹಸೀಲ್ದಾರ್ ಅವರ ಮುಖಾಂತರ ಮನವಿ ಪತ್ರ ಸಲ್ಲಿಸಿದರು.ಆದಿ ಕರ್ನಾಟಕ ಜನಾಂಗದ ಸಿದ್ದಪ್ಪಾಜಿ ರಸ್ತೆಯ ದೊಡ್ಡ ಯಜಮಾನ ಗೋಪಾಲ, ಪುರಸಭಾ ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ಜಿಪಂ ಮಾಜಿ ಸದಸ್ಯ ಎಚ್.ಸಿ. ಮಂಜುನಾಥ್, ಎಚ್.ಎನ್. ನಾಗರಾಜು, ನಂಜುಂಡ ಮೂರ್ತಿ, ಮಾಜಿ ಯಜಮಾನರಾದ ನಾಗರಾಜು, ಬಂಗಾರಯ್ಯ, ಸೋಮಣ್ಣ, ಸಿಂಗಯ್ಯ, ನರಸಿಂಹಮೂರ್ತಿ, ಕುಮಾರ್, ಎಚ್.ಸಿ. ವೆಂಕಟೇಶ್ ಭಾಗವಹಿಸಿದ್ದರು.