ಸಾರಾಂಶ
ಹಗಲು ವೇಳೆ ನಿರಂತರ 7 ತಾಸು ತ್ರಿಫೇಸ್ ವಿದ್ಯುತ್ ನೀಡುವಂತೆ ಹಾಗೂ ಕಾಗಿನೆಲೆ ಬಳಿಯಿರುವ 110/ ಕೆವಿ ಪವರ್ ಸ್ಟೇಶನ್ ಶೀಘ್ರವೇ ಉದ್ಘಾಟಿಸಿ ರೈತರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿ ರೈತರು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಕುಮ್ಮೂರ ಕ್ರಾಸ್ ಬಳಿಯಿರುವ ಪವರ್ ಸ್ಟೇಶನ್ 33/11 (ಕೆಇಬಿ ಗ್ರಿಡ್) ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಬ್ಯಾಡಗಿ: ಹಗಲು ವೇಳೆ ನಿರಂತರ 7 ತಾಸು ತ್ರಿಫೇಸ್ ವಿದ್ಯುತ್ ನೀಡುವಂತೆ ಹಾಗೂ ಕಾಗಿನೆಲೆ ಬಳಿಯಿರುವ 110/ ಕೆವಿ ಪವರ್ ಸ್ಟೇಶನ್ ಶೀಘ್ರವೇ ಉದ್ಘಾಟಿಸಿ ರೈತರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿ ರೈತರು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಕುಮ್ಮೂರ ಕ್ರಾಸ್ ಬಳಿಯಿರುವ ಪವರ್ ಸ್ಟೇಶನ್ 33/11 (ಕೆಇಬಿ ಗ್ರಿಡ್) ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಈ ವೇಳೆ ಮಾತನಾಡಿದ ರೈತ ಮುಖಂಡ ಮಂಜುನಾಥ ತೋಟದ, ಈ ಹಿಂದೆ ಪ್ರತಿ ದಿನ 7 ತಾಸು ವಿದ್ಯುತ್ ನೀಡುತ್ತಿದ್ದ ಅಧಿಕಾರಿಗಳು ಏಕಾಏಕಿ ರೈತರಿಗೆ ಯಾವುದೇ ಮಾಹಿತಿ ನೀಡದೇ 6 ತಾಸಿಗೆ ಸೀಮಿತಗೊಳಿಸಿದ್ದಾರೆ. ಹಲವು ವರ್ಷಗಳ ನಿರಂತರ ಹೋರಾಟದ ಫಲವಾಗಿ 7 ತಾಸು ವಿದ್ಯುತ್ ಪಡೆಯುತ್ತಿದ್ದೇವೆ. ಆದರೆ ಇದೀಗ ಯಾರಿಗೂ ಮಾಹಿತಿ ನೀಡದೇ ಕೇವಲ 6 ತಾಸು ವಿದ್ಯುತ್ ನೀಡುವುದಾಗಿ ನಿರ್ಧರಿಸಿದ್ದು ಎಷ್ಟರಮಟ್ಟಿಗೆ ಸರಿ? ಯಾರ ಒತ್ತಡಕ್ಕೆ ಮಣಿದು ಈ ಕೆಲಸ ಮಾಡುತ್ತಿದ್ದೀರಿ ಎಂಬುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದರಲ್ಲದೇ ಎಂದಿನಂತೆ 7 ತಾಸು ವಿದ್ಯುತ್ ನೀಡಲೇಬೇಕು ಎಂದು ಬಿಗಿಪಟ್ಟು ಹಿಡಿದರು.ರೈತ ಮುಖಂಡ ಶೇಖಪ್ಪ ಕಾಶಿ ಮಾತನಾಡಿ, ಕಾಗಿನೆಲೆ ಬಳಿಯಿರುವ 110/ಕೆವಿ ಪವರ್ ಸ್ಟೇಶನ್ ಆರಂಭಿಸುವುದಾಗಿ ಕಳೆದ 13 ವರ್ಷದಿಂದ ಸುಳ್ಳು ಹೇಳುತ್ತಾ ಬಂದಿದ್ದು, ಮೂವರು ಜನ ಶಾಸಕರು ಬಂದು ಹೋದರೂ ಸದರಿ ಸ್ಟೇಶನ್ ಸಾರ್ವಜನಿಕ ಸೇವೆಗೆ ಲಭ್ಯವಾಗಿಲ್ಲ. ಜನಪ್ರತಿನಿಧಿಗಳ ಪ್ರತಿಷ್ಠೆಗೆ ಪವರ ಸ್ಟೇಶನ್ ಬಲಿಯಾಗಿದ್ದು, ಇದರಿಂದ ಸುಮಾರು 25 ಗ್ರಾಮಗಳ ರೈತರು ನೀರಾವರಿ ಸೌಲಭ್ಯವಿಲ್ಲದೇ ಹೈರಾಣಾಗಿದ್ದಾರೆ ಎಂದರು.ವಿಮಾ ಕಂಪನಿಗಳ ಕಪಿಮುಷ್ಠಿಗೆ ಸಿಲುಕಿದ ಸರ್ಕಾರ ಬೆಳೆವಿಮೆ ನೀಡಲಿಲ್ಲ. ಬೆಳೆ ವಿಮೆ, ಬೆಳೆ ಪರಿಹಾರ ಸೇರಿದಂತೆ ಇನ್ನಿತರ ಹತ್ತು ಹಲವು ಸಮಸ್ಯೆಗಳನ್ನು ಜೀವಂತವಾಗಿಟ್ಟು ಈಗಾಗಲೇ ರೈತರ ಬದುಕನ್ನು ಕಸಿದುಕೊಳ್ಳಲಾಗಿದೆ. ಇದರ ಜೊತೆಗೆ ಇದೀಗ ವಿದ್ಯುತ್‌ಗೂ ಸಂಚಕಾರ ತಂದಿರುವುದು ಸರಿಯಲ್ಲ. ರೈತರು ಬಿತ್ತಿ ಬೆಳೆಯದಿದ್ದರೆ ನೀವೇನು ತಿನ್ನಲು ಸಾಧ್ಯ, ಕೂಡಲೇ ಮೊದಲಿದ್ದ 7 ತಾಸು ವಿದ್ಯುತ್ ನೀಡುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದರು.ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಎಇಇ ರಾಜಶೇಖರ ಅರಳಿಕಟ್ಟಿ ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಿದರು. ಕಾಗಿನೆಲೆ ಬಳಿಯಿರುವ 110/ಕೆವಿ ಪವರ್ ಸ್ಟೇಷನ್ ಈಗಾಗಲೇ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಬರುವ 5 ದಿನಗಳಲ್ಲಿ ಎಂದಿನಂತೆ 7 ತಾಸು ವಿದ್ಯುತ್ ನೀಡುವ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ರಾಮಗೌಡ ಮರಿಗೌಡರ, ಮಲ್ಲೇಶ ಗೋಣಿ, ಉಮೇಶ ಕೆಂಚನಗೌಡ್ರ, ಸಂತೋಷ ಕಲ್ಮನಿ, ಚನ್ನಬಸಪ್ಪ ಜಿಗಣಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.