ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಲು ವಿನೋದ್ ಕುಮಾರ್‌ ಆಗ್ರಹ

| Published : Feb 12 2024, 01:31 AM IST

ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಲು ವಿನೋದ್ ಕುಮಾರ್‌ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಬೇಕು ಎಂದು ಬಾಳೆಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿನೋದ್ ಕುಮಾರ್ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸರ್ಕಾರ ಚಿಕ್ಕಮಗಳೂರು ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಬೇಕು ಎಂದು ಬಾಳೆಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿನೋದ್ ಕುಮಾರ್ ಒತ್ತಾಯಿಸಿದರು.

ಶುಕ್ರವಾರ ತಾಲೂಕು ಪಶು ಸಂಗೋಪನಾ ಇಲಾಖೆ ಆಶ್ರಯದಲ್ಲಿ ಬಾಳೆಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಆವರಣದಲ್ಲಿ ನಡೆದ ಉಚಿತ ಜಾನುವಾರ ಚಿಕಿತ್ಸೆ, ಮಿಶ್ರ ತಳಿ ಹಸು ಮತ್ತು ಕರುಗಳ ಪ್ರದರ್ಶನ ಹಾಗೂ ಬರಡು ರಾಸುಗಳ ಚಿಕಿತ್ಸಾ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.ಪ್ರಸ್ತುತ ನರಸಿಂಹರಾಜಪುರ ತಾಲೂಕಿನ ವ್ಯಾಪ್ತಿಯಲ್ಲಿ ಹಾಲು ಸಂಗ್ರಹಣೆ ಮಾಡುತ್ತಿರುವುದು ಶಿವಮೊಗ್ಗ ಹಾಲು ಒಕ್ಕೂಟ ದವರು. ಆದರೆ, ಹಾಲು ಮಾರಾಟ ಮಾಡುತ್ತಿರುವುದು ಹಾಸನ ಹಾಲು ಒಕ್ಕೂಟದವರು. ಇದರಿಂದ ಈ ಭಾಗದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯ ಸಿಗುತ್ತಿಲ್ಲ. ಪ್ರಸ್ತುತ ಹೈನುಗಾರಿಕೆಯಲ್ಲಿ ರೈತರ ಸಂಖ್ಯೆ ಕಡಿಮೆಯಾಗಿದೆ. ರೈತರು ಮಾರಾಟ ಮಾಡುವ ಹಾಲಿಗೆ ಸಮರ್ಪಕ ದರ ದೊರೆಯುತ್ತಿಲ್ಲ. ಒಂದು ಲೀಟರ್‌ಗೆ 28 ರುಪಾಯಿ ದೊರೆಯುತ್ತಿದೆ. ಒಂದು ಕಟ್ಟು ಹುಲ್ಲಿಗೆ 30 ರು. ಇದೆ. 1 ಕೆಜಿ ಹಿಂಡಿ ದರ 50 ರು. ಆಗಿದೆ. ಪಶುಸಂಗೋಪನೆ ಕೈಗೊಳ್ಳಲು ರೈತರಿಗೆ ಹೆಚ್ಚು ಉತ್ತೇಜನ ಸಿಗಬೇಕಾದರೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಲು ಕ್ರಮಕೈಗೊಳ್ಳ ಬೇಕು. ಇಲ್ಲವೆ ಹಾಲು ಮಾರಾಟ ಮಾಡುವ ಹಾಸನ ಹಾಲು ಒಕ್ಕೂಟದವರೇ ಇಲ್ಲಿನ ಹಾಲು ಖರೀದಿಸು ವ್ಯವಸ್ಥೆ ಜಾರಿಗೆ ತರಲು ಶಾಸಕರು ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಆಗ್ರಹಿಸಿದರು.

ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಶಿವಕುಮಾರ್, ಹಸುಗಳಿಗೆ ಒಣ ಮೇವು , ಹಸಿ ಮೇವು ಕೊಡುವ ವಿಧಾನ ಹಾಗೂ ಹಸುಗಳ ಪೋಷಣೆ ಬಗ್ಗೆ ಮಾಹಿತಿ ನೀಡಿದರು.

ಕಡಹಿನಬೈಲು ಬಕ್ರಿಹಳ್ಳ ಏತ ನೀರಾವರಿ ಬಳಕೆದಾರರ ಸಂಘದ ಅಧ್ಯಕ್ಷ ಎಸ್.ಡಿ.ರಾಜೇಂದ್ರ ಮಾತನಾಡಿ, ಪಶು ಇಲಾಖೆ ರೈತರಿಗೆ ಸೌಲಭ್ಯ ನೀಡುವಾಗ ಹಾಲು ಉತ್ಪಾದಕರ ಸಂಘದ ಸಲಹೆ ಪಡೆಯುವಂತೆ ಸಲಹೆ ನೀಡಿದರು.ಅತಿಥಿಗಳಾಗಿ ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನಿಲ್ ಕುಮಾರ್, ಸದಸ್ಯ ಚಂದ್ರಶೇಖರ್, ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಕೆ.ಕೆ.ಬೆನ್ನಿ, ಸಂಘದ ನಿರ್ದೇಶಕ ಎಂ.ಜೆ.ವಿಲ್ಸನ್, ಸಹಾಯಕ ತೋಟಗಾರಿಕಾ ನಿರ್ದೇಶಕ ರಾಹುಲ್, ಪಶು ಇಲಾಖೆ ಹಿರಿಯ ಪಶು ವೈದ್ಯಕೀಯ ಪರೀಕ್ಷಿಕ ಎನ್‌.ಟಿ. ಶೇಷಾಚಲ, ಹಾಲು ಉತ್ಪಾದಕರ ಸಂಘದ ನಿರ್ದೇಶಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು.ಜಾನುವಾರುಗಳ ಸ್ಪರ್ಧೆಯಲ್ಲಿ ವಿನೋದ್ ಕುಮಾರ್‌ ಸಾಕಿದ ಎಚ್ಎಫ್ ತಳಿ ಹಸುವಿಗೆ ಪ್ರಥಮ ಬಹುಮಾನ, ದ್ವಿತೀಯ ಬಹುಮಾನ ಶೀಬು, ಗಿರ್ ತಳಿಯ ಹಸು ಸಾಕಿದ ವಿಲ್ಸನ್ ಪ್ರಥಮ ಬಹುಮಾನ ,‌ ಜರ್ಸಿ ತಳಿಯ ಹಸು ಸಾಕಿದ ಧನಂಜಯ ಅವರು ಪ್ರಥಮ ಬಹುಮಾನ ಪಡೆದುಕೊಂಡರು. 21 ಹಸು ಮತ್ತು ಕರುಗಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.