ಮಾಧ್ಯಮ ಬಲಿಷ್ಠವಾದರೆ ಪ್ರಜಾಪ್ರಭುತ್ವ ಕ್ರಿಯಾಶೀಲವಾಗಲು ಸಾಧ್ಯ: ಸಚಿವ ಡಾ.ಎಚ್.ಸಿ. ಮಹದೇವಪ್ಪ

| Published : Dec 05 2024, 12:30 AM IST

ಸಾರಾಂಶ

ಮಾಧ್ಯಮದವರು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಕೆಲಸ ಮಾಡುವವರು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಕೆಲಸ ಮಾಡಬೇಕು. ಆಗ ನಿಮ್ಮ ವೃತ್ತಿಗೆ ಗೌರವ ಸಲ್ಲಿಸಿದಂತಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮಾಧ್ಯಮ ಬಲಿಷ್ಠವಾಗಿದ್ದರೆ ಪ್ರಜಾಪ್ರಭುತ್ವ ಕ್ರಿಯಾಶೀಲವಾಗಿರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಭಿಪ್ರಾಯಪಟ್ಟರು.

ದಲಿತ ಮಹಾಸಭಾವು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಏರ್ಪಡಿಸಿದ್ದ 2024-25ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪಡೆದ ಪತ್ರಕರ್ತರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ಧ್ವನಿ ಇಲ್ಲದವರಿಗೆ ಧ್ವನಿಯಾಗುವ ಉದ್ದೇಶದಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರು ಮೂಕನಾಯಕ, ಬಹಿಷ್ಕೃತ ಭಾರತ ಪತ್ರಿಕೆ ಹೊರತಂದಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಅವರು ಈ ಕೆಲಸ ಮಾಡಿದ್ದರು ಎಂದು ಹೇಳಿದರು.

ಶಾಸಕ ತನ್ವೀರ್ ಸೇಠ್ ಮಾತನಾಡಿ, ಮಾಧ್ಯಮದವರು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಕೆಲಸ ಮಾಡುವವರು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಕೆಲಸ ಮಾಡಬೇಕು. ಆಗ ನಿಮ್ಮ ವೃತ್ತಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಇತ್ತೀಚೆಗೆ ಮಾಧ್ಯಮಗಳಲ್ಲಿ ಮೂಡಾ ಸಭೆಯಲ್ಲಿ ಬಾಡೂಟ ಮಾಡಿದರು ಎಂಬುದು ದೊಡ್ಡ ಸುದ್ದಿಯಾಯಿತು. ನಿಜವಾಗಿ ಅದು ದೊಡ್ಡ ಸುದ್ದಿಯೇ ಅಲ್ಲ. ಬದಲಿಗೆ ಸಭೆಯಲ್ಲಿ ಏನೇನು ಚರ್ಚೆ ಆಯಿತು ಎಂಬುದಷ್ಟೇ ಸುದ್ದಿ ಆಗಬೇಕಿತ್ತು. ಸಾರ್ವಜನಿಕರಿಗೆ ಅಗತ್ಯವಿರುವ ವಿಷಯಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಬೇಕು. ಯಾವುದೇ ಸರ್ಕಾರವಾದರೂ ಜನರ ಕಷ್ಟ ಕಾರ್ಪಣ್ಯ ಹೋಗಲಾಡಿಸಲು ಕಾರ್ಯಕ್ರಮ ಜಾರಿಗೊಳಿಸಬೇಕೆ ಹೊರತು, ಜಾತಿ ಆಧಾರದ ಮೇಲೆ ಕಾರ್ಯಕ್ರಮ ಮಾಡುವುದಲ್ಲ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು, ದಲತಿ ಮಹಾಸಭಾದ ಅಧ್ಯಕ್ಷ ಎಸ್. ರಾಜೇಶ್, ನಗರ ಪಲಿಕೆ ಮಾಜಿ ಸದಸ್ಯ ಧ್ರುವರಾಜ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್ ಇದ್ದರು.