ಪ್ರಜಾಪ್ರಭುತ್ವ ನಮಗೆ ಊರುಗೋಲು ಆಗಬೇಕು: ಮೇಟಿ ಮಲ್ಲಿಕಾರ್ಜುನ

| Published : Jan 31 2024, 02:15 AM IST

ಪ್ರಜಾಪ್ರಭುತ್ವ ನಮಗೆ ಊರುಗೋಲು ಆಗಬೇಕು: ಮೇಟಿ ಮಲ್ಲಿಕಾರ್ಜುನ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜಾಪ್ರಭುತ್ವ ನಮ್ಮನ್ನು ಕೈಹಿಡಿದು ನಡೆಸುವ ಊರು ಗೋಲಾಗಬೇಕು. ಪ್ರಜಾಪ್ರಭುತ್ವದಲ್ಲಿ ಹಕ್ಕು ಮತ್ತು ಆದ್ಯತೆಗಳನ್ನು ಸಮಾನವಾಗಿ ಕಾಣಬೇಕು. ಪ್ರಜಾಪ್ರಭುತ್ವ ಪ್ರಸ್ತುತ ಅಸ್ತ್ರವಾಗಿ ಬಳಕೆ ಆಗುತ್ತಿದೆ. ಜಾತಿ, ಧರ್ಮವನ್ನು ಮೀರಿ ಪ್ರಜಾಪ್ರಭುತ್ವವನ್ನು ಒಪ್ಪಿಕೊಳ್ಳಬೇಕು. ಆಗ ಮಾತ್ರ ಅದನ್ನು ದಿವ್ಯಶಕ್ತಿಯಾಗಿ ಕಾಣಬಹುದು. ಇಲ್ಲವಾದರೆ, ವ್ಯವಸ್ಥೆಯಲ್ಲಿ ವ್ಯಂಗ್ಯಭಾವ ಮೂಡುತ್ತದೆ ಎಂದು ಸಹ್ಯಾದ್ರಿ ಕಲಾ ಕಾಲೇಜು ಭಾಷಾಶಾಸ್ತ್ರ ವಿಭಾಗ ಪ್ರಾಧ್ಯಾಪಕ ಮೇಟಿ ಮಲ್ಲಿಕಾರ್ಜುನ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರಜಾಪ್ರಭುತ್ವ ನಮ್ಮನ್ನು ಕೈಹಿಡಿದು ನಡೆಸುವ ಊರು ಗೋಲಾಗಬೇಕು. ಪ್ರಜಾಪ್ರಭುತ್ವದಲ್ಲಿ ಹಕ್ಕು ಮತ್ತು ಆದ್ಯತೆಗಳನ್ನು ಸಮಾನವಾಗಿ ಕಾಣಬೇಕು ಎಂದು ಸಹ್ಯಾದ್ರಿ ಕಲಾ ಕಾಲೇಜು ಭಾಷಾಶಾಸ್ತ್ರ ವಿಭಾಗ ಪ್ರಾಧ್ಯಾಪಕ ಮೇಟಿ ಮಲ್ಲಿಕಾರ್ಜುನ ಹೇಳಿದರು.

ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಆವರಣದಲ್ಲಿ ಮಂಗಳವಾರ ಕುವೆಂಪು ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಯೋಜಿಸಿದ್ದ ಯುವ ಸಾಂಸ್ಕೃತಿಕ ವೈವಿಧ್ಯ, ಯುವಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ಪ್ರಸ್ತುತ ಅಸ್ತ್ರವಾಗಿ ಬಳಕೆ ಆಗುತ್ತಿದೆ. ಜಾತಿ, ಧರ್ಮವನ್ನು ಮೀರಿ ಪ್ರಜಾಪ್ರಭುತ್ವವನ್ನು ಒಪ್ಪಿಕೊಳ್ಳಬೇಕು. ಆಗ ಮಾತ್ರ ಅದನ್ನು ದಿವ್ಯಶಕ್ತಿಯಾಗಿ ಕಾಣಬಹುದು. ಇಲ್ಲವಾದರೆ, ವ್ಯವಸ್ಥೆಯಲ್ಲಿ ವ್ಯಂಗ್ಯಭಾವ ಮೂಡುತ್ತದೆ ಎಂದರು.

ವಿದ್ಯಾರ್ಥಿಗಳಲ್ಲಿ ಜಾತಿ- ಧರ್ಮಗಳ ಕುರಿತ ಗೊಂದಲ ದೂರ ಮಾಡಲು ನಮ್ಮ ವ್ಯವಸ್ಥೆ ವಿಫಲವಾಗಿದೆ. ದೇಶದ ಪ್ರಗತಿಗೆ ಜಾತಿ, ಧರ್ಮದ ಹಿಡಿತದಿಂದ ಯುವಪೀಳಿಗೆ ಹೊರಬಾರದ ಹೊರತು, ಮಾದರಿಯ ವ್ಯಕ್ತಿ ಹಾಗೂ ರಾಜಕಾರಣಿಯನ್ನು ಆರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಾಜಕೀಯವಾಗಿ ಮಾತ್ರ ಒಪ್ಪಿ ಕೊಂಡಿದ್ದೇವೆ. ಬದಲಾಗಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕವಾಗಿಯೂ ಒಪ್ಪಿಕೊಳ್ಳಬೇಕು. ಆಗ ಮಾತ್ರ ವ್ಯವಸ್ಥೆಯಲ್ಲಿನ ಬಿಕ್ಕಟ್ಟುಗಳಿಗೆ ಉತ್ತರ ಕಂಡುಕೊಳ್ಳಬಹುದು ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಎಂ.ಕೆ. ವೀಣಾ ಮಾತನಾಡಿ, ನಾವು ಬೃಹತ್ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಷ್ಟ್ರ ಕಲ್ಪನೆ ಹೊಂದಿದ್ದೇವೆ. ಆದರೆ, ಸೈದ್ಧಾಂತಿಕವಾಗಿ ಮಾತನಾಡುವಷ್ಟು ಮುಕ್ತ ಸಮಾನತೆ ನಾವು ಹೊಂದಿಲ್ಲ. ಇದರಿಂದ ಪ್ರಜಾಪ್ರಭುತ್ವಕ್ಕೆ ಹಿನ್ನಡೆ ಆಗಿದೆ ಎಂದು ಹೇಳಿದರು.

ಎಲ್ಲ ಧರ್ಮದವರು ಸಮಾನರು ಎಂದು ಮಾತಿನಲ್ಲಿ ಮಾತ್ರ ಹೇಳುತ್ತೇವೆ. ಆದರೆ, ಇಲ್ಲಿ ನಮ್ಮದೇ ಧರ್ಮ ಶ್ರೇಷ್ಠ ಎನ್ನುವ ಅಹಃ ರೂಢಿಸಿಕೊಂಡಿದ್ದೇವೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತಿ ಹಿಡಿಯಲು ಸಾಧ್ಯವಿಲ್ಲ. ಆದ್ದರಿಂದ ನಾಗರಿಕ ಪ್ರಜ್ಞೆ ಹಾಗೂ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನಾ ಅಧಿಕಾರಿಗಳಾದ ಕುಂದನ್ ಬಸವರಾಜ್, ಶುಭಾ ಮರವಂತೆ, ವಿದ್ಯಾರ್ಥಿ ಕ್ಷೇಮಾಧಿಕಾರಿ ಎ.ಶಿವಮೂರ್ತಿ, ಎಂ.ಪರಶುರಾಮ್ ಇದ್ದರು.

- - - ಬಾಕ್ಸ್ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಶಕ್ತಿ ಯುವಪೀಳಿಗೆಗೆ ಇದೆ. ಅವಕಾಶ ಸದ್ಬಳಕೆಯಿಂದ ಮತದಾನದಲ್ಲಿ ಪಾಲ್ಗೊಳ್ಳಬೇಕು. ಇಲ್ಲವಾದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಹೊರಗುಳಿದಂತೆ ಅರ್ಥ. ಸದೃಢ ರಾಷ್ಟ್ರ ನಿರ್ಮಾಣದ ಭಾಗವಾಗಿ ಉತ್ತಮ ನಾಯಕರನ್ನು ಆಯ್ಕೆ ಮಾಡಲು ತಪ್ಪದೇ ಮತದಾನ ಮಾಡಿ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಬಹುದು

- ಸ್ನೇಹಲ್ ಸುಧಾಕರ್ ಲೋಖಂಡೆ, ಸಿಇಒ, ಜಿಪಂ

- - - -30ಎಸ್‌ಎಂಜಿಕೆಪಿ08:

ಕುವೆಂಪು ವಿಶ್ವವಿದ್ಯಾಲಯ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಇಲ್ಲಿನ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಯುವ ಸಾಂಸ್ಕೃತಿಕ ವೈವಿಧ್ಯ, ಯುವ ಸಂವಾದ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಸ್ನೇಹಲ್‌ ಸುಧಾಕರ್‌ ಲೋಖಂಡೆ ಅವರನ್ನು ಅಭಿನಂದಿಸಲಾಯಿತು.