ಸಾರಾಂಶ
ಶ್ರೀ ಕ್ಷೇತ್ರ ಕೊಂಡಾಣದ ಭಂಡಾರ ಮನೆಯ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಧ್ವಂಸ ಮಾಡಿದ ಆರೋಪಿಗಳ ವಿರುದ್ಧ ಮತ್ತು ಭಂಡಾರಮನೆಯ ಕೆಡವಿದ ಸ್ಥಳದಲ್ಲೇ ನೂತನ ಭಂಡಾರ ಮನೆಯನ್ನು ನಿರ್ಮಾಣ ಮಾಡುವಂತೆ ಆಗ್ರಹಿಸಿ ಕೋಟೆಕಾರು ಪಟ್ಟಣ ಪಂಚಾಯತ್ ಎದುರು ಸೋಮವಾರ ಪ್ರತಿಭಟನೆ ನಡೆಯಿತು. ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಯಿತು.
ಕನ್ನಡಪ್ರಭ ವಾರ್ತೆ ಉಳ್ಳಾಲ
ಲಕ್ಷಾಂತರ ಭಕ್ತರು ಆರಾಧನೆ ಮಾಡಿಕೊಂಡು ಬರುತ್ತಿರುವ ಶ್ರೀ ಕ್ಷೇತ್ರ ಕೊಂಡಾಣದ ನಿರ್ಮಾಣ ಹಂತದಲ್ಲಿದ್ದ ಭಂಡಾರಮನೆಯ ಕಟ್ಟಡ ಅದರಲ್ಲೂ ಸರಕಾರದ ಮುಜುರಾಯಿ ಇಲಾಖೆಗೆ ಸೇರಿದ ಆಸ್ತಿಯನ್ನು ನಾಶ ಮಾಡಿದ ಆರೋಪಿಗಳಿಗೆ ಒಂದೇ ದಿನದಲ್ಲಿ ಬೇಲ್ ಸಿಗುವ ರೀತಿಯಲ್ಲಿ ಸೆಕ್ಷನ್ ಹಾಕಲು ಕಾಂಗ್ರೆಸ್ ಸರಕಾರದ ಪ್ರತಿನಿಧಿಗಳ ಕೈವಾಡವಿದೆ ಎಂದು ನ್ಯಾಯವಾದಿ, ಹಿಂದೂ ಮುಖಂಡ ಜಗದೀಶ್ ಶೇಣವ ಆರೋಪಿಸಿದರು.ಶ್ರೀ ಕ್ಷೇತ್ರ ಕೊಂಡಾಣದ ಭಂಡಾರ ಮನೆಯ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಧ್ವಂಸ ಮಾಡಿದ ಆರೋಪಿಗಳ ವಿರುದ್ಧ ಮತ್ತು ಭಂಡಾರಮನೆಯ ಕೆಡವಿದ ಸ್ಥಳದಲ್ಲೇ ನೂತನ ಭಂಡಾರ ಮನೆಯನ್ನು ನಿರ್ಮಾಣ ಮಾಡುವಂತೆ ಆಗ್ರಹಿಸಿ ಕೋಟೆಕಾರು ಪಟ್ಟಣ ಪಂಚಾಯತ್ ಎದುರು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದೂ ಸಂಘಟನೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ, 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಈ ಕಟ್ಟಡದ ಮೇಲೆ ಪ್ರತಿಯೊಬ್ಬ ಹಿಂದೂ ಬಾಂಧವರ ಭಾವನೆಗಳಿವೆ. ಹಣವನ್ನು ಹಿಂದೂ ಸಮಾದ ಬಾಂಧವರು ಒಟ್ಟು ಸೆರಿಸುತ್ತಾರೆ. ಆದರೆ ಭಾವನೆಗಳಿಗೆ ದಕ್ಕೆಯಾಗಿರುವುದನ್ನು ಯಾರಿದಂಲೂ ಸಹಿಸಲು ಸಾಧ್ಯವಿಲ್ಲ ಎಂದರು. ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್, ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಸೇವಾ ಪ್ರಮುಖ್ ಗೋಪಾಲ ಕುತ್ತಾರ್, ಶ್ರೀಕ್ಷೇತ್ರ ಕೊಂಡಾಣದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಉದ್ಯಮಿ ಕೆ.ಪಿ. ಸುರೇಶ್ ಮಾಡೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವ್ವೆತ್ತಬೈಲ್, ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ಬಳಿಕ ಜಿಲ್ಲಾಧಿಕಾರಿಗಳ ಪರವಾಗಿ ಬಂದ ಮಂಗಳೂರು ಉಪವಿಭಾಗ ಸಹಾಯಕ ದಂಡಾಧಿಕಾರಿ ಹರ್ಷ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಕ್ಷೇತ್ರದಲ್ಲಿ ತಪ್ಪಿತಸ್ಥರಿಗೆ ದೈವ ಶಿಕ್ಷೆ ನೀಡಲಿ ಎಂದು ಪ್ರಾರ್ಥಿಸಿದರು.ಅಹಿತಕರ ಘಟನೆ ಸಂಭವಿಸದಂತೆ ಕ್ಷೇತ್ರದಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.