ಸಾರಾಂಶ
ಹೂಳೆತ್ತಿದ್ದಲ್ಲಿ ನದಿಯಲ್ಲಿ ನೀರಿನ ಸಂಗ್ರಹಕ್ಕೆ ತೊಡಕು ಉಂಟಾಗಲಿದೆ ಎಂದು ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ತಾಲೂಕು ಗುಡ್ಡೆ ಹೊಸೂರು ತೆಪ್ಪದ ಕಂಡಿ ಬಳಿ ಕಾವೇರಿ ನದಿಯ ಹೂಳೆತ್ತುವುದು ಮತ್ತು ಪೊದೆಗಳನ್ನು ತೆರವು ಮಾಡುವ ಕಾಮಗಾರಿಗೆ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಮತ್ತು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು ಕಾಮಗಾರಿ ಸ್ಥಗಿತಗೊಂಡಿದೆ.
ಕಾವೇರಿ ನೀರಾವರಿ ನಿಗಮದ ಮೂಲಕ ಕಳೆದ ಎರಡು ದಿನಗಳಿಂದ ಗುಡ್ಡೆ ಹೊಸೂರು- ಸಿದ್ದಾಪುರ ರಸ್ತೆಯ ತೆಪ್ಪದ ಕಂಡಿ ಬೆಟಗೇರಿ ಬಳಿ ಹಿಟಾಚಿ ಯಂತ್ರ ಬಳಸಿ ನದಿಯಿಂದ ಹೂಳೆತ್ತಲು ಪೂರ್ವ ಸಿದ್ಧತೆ ಕಾಮಗಾರಿ ನಡೆಯುತ್ತಿತ್ತು.ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ,ಉಪಾಧ್ಯಕ್ಷ ಮಾದಪ್ಪ ಸದಸ್ಯರು ಹಾಗೂ ಸ್ಥಳೀಯರು ನದಿ ಭಾಗದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುವುದನ್ನು ವಿರೋಧಿಸಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಹೂಳೆತ್ತಿದ್ದಲ್ಲಿ ನದಿಯಲ್ಲಿ ನೀರಿನ ಸಂಗ್ರಹಕ್ಕೆ ತೊಡಕು ಉಂಟಾಗಲಿದೆ ಎಂದು ಅವರು ತಿಳಿಸಿದರು.
ಈ ಹಿನ್ನಲೆಯಲ್ಲಿ ಸ್ಥಳದಲ್ಲಿ ಕಾಮಗಾರಿ ನಡೆಸುತ್ತಿದ್ದ ಕಾವೇರಿ ನೀರಾವರಿ ನಿಗಮದ ಸಹಾಯಕ ಅಭಿಯಂತರ ಕಿರಣ್ ಅವರು ಕೆಲಸ ಸ್ಥಗಿತಗೊಳಿಸಿದರು.ನದಿಯಲ್ಲಿ ನೀರಿನ ಹರಿವಿಗೆ ಅಡ್ಡಲಾಗಿ ರಾಶಿ ಬಿದ್ದಿದ್ದ ಹೂಳು ಎತ್ತುವುದು ಮತ್ತು ಪೊದೆಗಳನ್ನು ತೆರವು ಮಾಡಲು ನಿಗಮ ಮೂಲಕ ಈ ಕಾಮಗಾರಿ ಕೈಗೆತ್ತಿಕೊಂಡಿತ್ತು ಎಂದು ಕಿರಣ್ ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೆ ತಿಳಿಸಿದ್ದಾರೆ.