ಎನ್‌ಡಿಆರ್‌ಎಫ್ ತಂಡದವರಿಂದ ಅಗ್ನಿ ದುರಂತ, ಪ್ರವಾಹ ಪರಿಸ್ಥಿತಿ, ಭೂಕಂಪನ ಇನ್ನಿತರೆ ಅವಘಡ ಸಂಭವಿಸಿದಾಗ ಮುಂಜಾಗ್ರತಾ ಕ್ರಮದ ಬಗ್ಗೆ ನಾಗರಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎನ್‌ಡಿಆರ್‌ಎಫ್ ಪಿಎಸ್‌ಐ ಮುಖೇಶಕುಮಾರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಮಲನಗರ

ಎನ್‌ಡಿಆರ್‌ಎಫ್ ತಂಡದವರಿಂದ ಅಗ್ನಿ ದುರಂತ, ಪ್ರವಾಹ ಪರಿಸ್ಥಿತಿ, ಭೂಕಂಪನ ಇನ್ನಿತರೆ ಅವಘಡ ಸಂಭವಿಸಿದಾಗ ಮುಂಜಾಗ್ರತಾ ಕ್ರಮದ ಬಗ್ಗೆ ನಾಗರಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಎನ್‌ಡಿಆರ್‌ಎಫ್ ಪಿಎಸ್‌ಐ ಮುಖೇಶಕುಮಾರ ತಿಳಿಸಿದರು.

ಕಮಲನಗರ ಪಟ್ಟಣದ ಗ್ರಾ.ಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಆಯೋ ಜಿಸಿದ್ದ ಮಾಹಿತಿ, ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿ, ಅವಘಡಗಳು ಸಂಭವಿಸಿದಾಗ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಂಜಾಗ್ರತೆ ಬಗ್ಗೆ ಎನ್‌ಡಿಆರ್‌ ಎಫ್‌ನ ತರಬೇತಿ ಪಡೆದ ಅಧಿಕಾರಿಗಳಿಂದ ಮಾಹಿತಿ ನೀಡಲಾಗುತ್ತಿದೆ. ಇವುಗಳನ್ನು ತಿಳಿದು ಎಚ್ಚರಿಕೆ ವಹಿಸಬೇಕು ಎಂದರು.

ತಲೆಗೆ ಹೊಡೆತ ಬಿದ್ದಾಗ, ಗಾಯವಾದಾಗ, ಕಣ್ಣಿಗೆ ಗಾಯವಾದಾಗ, ಕೈ ಕಾಲುಗಳು ಮುರಿದಾಗ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ವಿದ್ಯಾರ್ಥಿಗಳ ಎದುರು ಪ್ರಾತ್ಯಕ್ಷಿಕೆ ನೀಡಿದರು. ಹೃದಯಘಾತವಾದಾಗ ಒಂದರಿಂದ ಆರು ನಿಮಿಷ ಪ್ರಮುಖ ಘಟ್ಟವಾಗಿದ್ದು, ಸಿಆರ್‌ಪಿ ಚಿಕಿತ್ಸೆ ನೀಡಬೇಕು. ನಿಂತಿರುವ ಹೃದಯವನ್ನು ಪುನಃ ಚಾಲನೆಗೊಳಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಮುಖ್ಯ ಪೇದೆಗಳಾದ ತೌಫಿಕ ಎಸ್.ಕೆ ಮಾತನಾಡಿ, ಬೆಂಕಿ ಬಿದ್ದಾಗ ತಕ್ಷಣವೇ ಅಗ್ನಿಶಾಮಕ ಠಾಣೆಗೆ ತಿಳಿಸಬೇಕು. 112 ಸಂಖ್ಯೆಗೆ ಮಾಹಿತಿ ನೀಡಬೇಕು. ಗ್ಯಾಸ್‌ಗೆ ಬೆಂಕಿ ಹೊತ್ತಿಕೊಂಡಾಗ ಬೆಂಕಿ ನಿಯಂತ್ರಿ ಸುವ ಕ್ರಮಗಳನ್ನು ತಿಳಿದುಕೊಂಡಿರಬೇಕು. ವಿದ್ಯಾರ್ಥಿಗಳು ಮಾಹಿತಿ ಅರ್ಥೈಸಿಕೊಂಡರೆ ಮುಂದಾಗಬಹುದಾದ ಅವಘಡಗಳನ್ನು ತಪ್ಪಿಸಬಹುದು ಎಂದರು.

ತಾಲೂಕಿನ ನಿಡೋದಾ ಗ್ರಾಮದಲ್ಲಿ ಸಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ನೋಡಲ ಅಧಿಕಾರಿ ಅಮಿತಕುಮಾರ ಕುಲಕರ್ಣಿ, ಗ್ರಾ.ಪಂ ಪಿಡಿಒ ದಿಲಿಪ ಸಂತಪುರೆ, ಉಪ ತಹಶೀಲ್ದಾರ್ ಗೊಪಾಳ ಕೃಷ್ಣ, ಶಿರಸ್ತೆದಾರ ಸವಿತಾ, ಕಂದಾಯ ನಿರೀಕ್ಷಕ ಪ್ರವೀಣ ಬಿರಾದಾರ, ಠಾಣಾ ಕುಶನೂರಿನ ಉಪ ತಹಶೀಲ್ದಾರ್ ಶಿವಾನಂದ ಹಾಗೂ ತಹಸೀಲ್‌ ಕಛೇರಿ ಸಿಬ್ಬಂದಿ, ಎನ್.ಡಿ.ಆರ್.ಎಫ್. ಸಿಬ್ಬಂದಿ ಹಾಜರಿದ್ದರು.