ಸಾರಾಂಶ
ಯುಜಿಡಿ ಹಾಗೂ ರಸ್ತೆಯ ಕಾಮಗಾರಿಗಳಿಗೆ ತಕ್ಷಣ ಅನುಮತಿ ಪಡೆಯುವಂತೆ ಹಾಗೂ ಎಲ್ಲೂ ಮಳೆ ನೀರು ನಿಲ್ಲದೆ ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕೆಂದು ಮೇಯರ್ ಅಭಿಯಂತರರಿಗೆ ಸೂಚಿಸಿದರು.
ಹುಬ್ಬಳ್ಳಿ:
ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೇಯರ್ ರಾಮಪ್ಪ ಬಡಿಗೇರ, ಕಮಿಷನರ್ ಡಾ. ಈಶ್ವರ ಉಳ್ಳಾಗಡ್ಡಿ ಜಂಟಿಯಾಗಿ ನವನಗರ ಭಾಗದ ಹಲವು ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಸಾರ್ವಜನಿಕ ಜಾಗವನ್ನು ಸ್ವಚ್ಛಗೊಳಿಸುವ ಜತೆ ತಗ್ಗು ಪ್ರದೇಶದಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವಂತೆ ಮೇಯರ್ ಪಾಲಿಕೆ ಸಿಬ್ಬಂದಿಗೆ ನಿರ್ದೇಶನ ನೀಡಿದರು. ಇದಲ್ಲದೇ ಮನೆ ಸುತ್ತಲೂ ಶುಚಿಯಾಗಿಟ್ಟುಕೊಳ್ಳುವಂತೆ ನಿವಾಸಿಗಳಿಗೆ ಮನವಿ ಮಾಡಿದರು.ಅಮರ ನಗರ, ವಿಜಯೇಶ್ವರಿ ಕಾಲನಿ, ಬಾಲಾಜಿನಗರ, ಪಂಚಾಕ್ಷರಿನಗರ, ನವನಗರ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಸಂಚರಿಸಿದರು.ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದರು. ಈ ವೇಳೆ ಸಾರ್ವಜನಿಕರು ಹಲವು ಸಮಸ್ಯೆಗಳ ಬಗ್ಗೆ ಮೇಯರ್ ಗಮನಕ್ಕೆ ತಂದರು. ಬಹಳಷ್ಟು ಜನರು ಒಳಚರಂಡಿ ತೊಂದರೆ ಬಗ್ಗೆ ದೂರು ನೀಡಿದರು. ಹದಗೆಟ್ಟ ರಸ್ತೆಯಿಂದ ಓಡಾಡಲು ತೊಂದರೆಯಾಗುತ್ತಿದೆ. ಅದರಲ್ಲೂ ಈ ಮಳೆಯಲ್ಲಿ ರಸ್ತೆಯಲ್ಲಿ ಸಂಚರಿಸಿದರೆ ಕೆಸರಿನಲ್ಲಿದ್ದಂತೆ ಅನುಭವವಾಗುತ್ತದೆ ಎಂದು ತಿಳಿಸಿದರು.
ಯುಜಿಡಿ ಹಾಗೂ ರಸ್ತೆಯ ಕಾಮಗಾರಿಗಳಿಗೆ ತಕ್ಷಣ ಅನುಮತಿ ಪಡೆಯುವಂತೆ ಹಾಗೂ ಎಲ್ಲೂ ಮಳೆ ನೀರು ನಿಲ್ಲದೆ ಸರಾಗವಾಗಿ ಹರಿಯುವಂತೆ ನೋಡಿಕೊಳ್ಳಬೇಕೆಂದು ಮೇಯರ್ ಸ್ಥಳದಲ್ಲಿ ಹಾಜರಿದ್ದ ಅಭಿಯಂತರರಿಗೆ ಸೂಚಿಸಿದರು.ಬಳಿಕ ವಲಯ ಕಚೇರಿ 4ಕ್ಕೆ ಭೇಟಿ ನೀಡಿ, ಕಚೇರಿ ಸಿಬ್ಬಂದಿಗಳ ಕಾರ್ಯ ವೈಖರಿ ಪರಿಶೀಲಿಸಿದರು. ಅರ್ಜಿಗಳನ್ನು ಪರಿಶೀಲಿಸಿ ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡದೆ ಇಟ್ಟಿರುವ ಕಡತದ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮೇಯರ್ ಭೇಟಿ ವೇಳೆ ಉಪಮೇಯರ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯರಾದ ಸುನೀತಾ ಮಾಳವದಕರ, ಚಂದ್ರಶೇಖರ ಮನಗುಂಡಿ, ಮಂಜುನಾಥ ಬುರ್ಲಿ, ಮಲ್ಲಿಕಾರ್ಜುನ ಗುಂಡೂರ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.