ಕೆರೆಗೆ ನೀರು ಹರಿಸದಿದ್ರೆ ಡ್ಯಾಂಗೆ ಮುತ್ತಿಗೆ: ಮಾಜಿ ಸಚಿವ ಎಚ್.ಡಿ.ರೇವಣ್ಣ ಎಚ್ಚರಿಕೆ

| Published : Mar 15 2024, 01:26 AM IST

ಕೆರೆಗೆ ನೀರು ಹರಿಸದಿದ್ರೆ ಡ್ಯಾಂಗೆ ಮುತ್ತಿಗೆ: ಮಾಜಿ ಸಚಿವ ಎಚ್.ಡಿ.ರೇವಣ್ಣ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ದಿನದಲ್ಲಿ ಹಾಸನ ಜಿಲ್ಲೆಯ ಕೆರೆಗಳಿಗೆ ನೀರು ಹರಿಸದಿದ್ದರೆ ಗೊರೂರು ಅಣೆಕಟ್ಟೆಗೆ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಸಿದರು. ಹಾಸನದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜೆಡಿಎಸ್‌ ಪ್ರತಿಭಟನೆಯಲ್ಲಿ ಮಾತನಾಡಿದರು.

ಅಹಿತಕರ ಘಟನೆಗೆ ಡಿಸಿ, ಎಸ್‌ಪಿ ಹೊಣೆ ಕನ್ನಡಪ್ರಭ ವಾರ್ತೆ ಹಾಸನ

ಎರಡು ದಿನದಲ್ಲಿ ಹಾಸನ ಜಿಲ್ಲೆಯ ಕೆರೆಗಳಿಗೆ ನೀರು ಹರಿಸದಿದ್ದರೆ ಗೊರೂರು ಅಣೆಕಟ್ಟೆಗೆ ಮುತ್ತಿಗೆ ಹಾಕಲಾಗುವುದು. ಪ್ರತಿ ತೂಬಿನ ಬಳಿ ಐನೂರು ಜನ ನಿಲ್ಲಿಸುತ್ತೇವೆ. ಏನಾದರೂ ಅಹಿತಕರ ಘಟನೆ ನಡೆದರೆ ಜಿಲ್ಲಾಧಿಕಾರಿ, ಎಸ್ಪಿ ನೇರ ಹೊಣೆಯಾಗುತ್ತಾರೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗೊರೂರಿನ ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಹಾಸನ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಇದ್ದರೂ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಗೊರೂರಿನ ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ನೀರು ಹರಿಸಲಾಗುತ್ತಿದೆ ಎಂದು ಕಿಡಿಕಾರಿದರು.

‘ಶುಕ್ರವಾರ ಸಂಜೆಯೊಳಗೆ ನಮ್ಮ ಜಿಲ್ಲೆಯ ಕೆರೆಗಳಿಗೆ ನೀರು ಬಿಡದಿದ್ದರೆ ಪ್ರತಿ ತೂಬಿನ ಬಳಿ ಐನೂರು ಜನ ನಿಲ್ಲಿಸುತ್ತೇನೆ. ಜೆಸಿಬಿ ಮೂಲಕ ತೂಬಿನಿಂದ ನೀರು ಹರಿಸುತ್ತೇವೆ. ಸಂಜೆ ಒಳಗೆ ಹಾಸನ ಜಿಲ್ಲೆಗೂ ನೀರು ಹರಿಸಬೇಕು. ತುಮಕೂರಿಗೂ ನೀರು ಬಿಟ್ಟು ಮತ್ತು ಹಾಸನ ಜಿಲ್ಲೆಗೂ ನೀರು ಕೊಡಬೇಕು. ಇಲ್ಲವಾದರೆ ಜಿಲ್ಲೆಯಲ್ಲಿ ಏನಾದರೂ ಅನಾಹುತ ಆದರೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೇ ನೇರ ಹೊಣೆ ಹೊರಬೇಕಾಗುತ್ತದೆ. ಹಿಂದೆ ದೊಡ್ಡಹಳ್ಳಿಯಲ್ಲಿ ಗೋಲಿಬಾರ್ ಆಗಿದೆ. ಹೊಳೆನರಸೀಪುರದಲ್ಲಿ ಲಾಠಿಚಾರ್ಜ್ ಆಗಿ ಆಗಿನ ಎಸ್ಪಿಗೆ ಹತ್ತು ವರ್ಷ ಜಾಮೀನು ಸಿಗಲಿಲ್ಲ. ಹಾಸನ ಜಿಲ್ಲೆಯಲ್ಲಿ ಎಮರ್ಜೆನ್ಸಿ ಹೇರಿದ್ದಾರೆ. ಹಿಂದೆ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರು. ಈಗ ಕಾಂಗ್ರೆಸ್ ಸರ್ಕಾರದಲ್ಲಿ ಹಾಸನದೊಳಗೆ ಎಮರ್ಜೆನ್ಸಿ ಹೇರಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಕುಡಿಯುವ ನೀರಿಗೆ ಕಾಂಗ್ರೆಸ್‌ನವರು ಎಮರ್ಜೆನ್ಸಿ ಹೇರಿದ್ದಾರೆ, ಇದು ದುರಾದೃಷ್ಟಕರ, ದೇವೇಗೌಡರು ಇರಲಿಲ್ಲ ಎಂದರೆ ತುಮಕೂರಿಗೆ ನೀರು ಹರಿಯುತ್ತಿರಲಿಲ್ಲ. ತುಮಕೂರಿಗೆ ನೀರು ಹರಿಸಲು ಜಿಲ್ಲೆಯ ರೈತರು ಜಮೀನು ಕಳೆದುಕೊಂಡಿದ್ದಾರೆ. ನೀರಾವರಿ ಸಲಹಾ ಸಮಿತಿ ಮೀಟಿಂಗ್ ಮಾಡದೇ ನೀರು ಬಿಟ್ಟಿದ್ದಾರೆ, ಇವರಿಗೆ ನಾಚಿಕೆಯಾಗಬೇಕು’ ಎಂದು ಕಿಡಿಕಾರಿದರು.

‘ನೀರು ಬಿಡದಿದ್ದರೆ ಜಿಲ್ಲೆಯಲ್ಲಿ ದಂಗೆ ಏಳಬೇಕಾಗುತ್ತದೆ. ನೀರು ಬಿಡದಿದ್ದರೆ ಗೊರೂರು ಅಣೆಕಟ್ಟಿಗೆ ಮುತ್ತಿಗೆ, ಜಾಕ್ವೆಲ್ ಬಳಿ ಐನೂರು ಜನ ಸೇರಿ ನೀರು ಹರಿಸುತ್ತೇವೆ. ನಾವು ಯಾವುದೇ ಮನವಿ ಕೊಡುವುದಿಲ್ಲ, ತುಮಕೂರು ಹೆಸರಿನಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ’ ಎಂದು ದೂರಿದರು.

ಇದೇ ವೇಳೆ ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಎಚ್.ಪಿ. ಸ್ವರೂಪ್, ಸಿ.ಎನ್. ಬಾಲಕೃಷ್ಣ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ರಘುಗೌಡ, ಎಪಿಎಂಸಿ ಉಪಾಧ್ಯಕ್ಷ ದೇವರಾಜು, ಪಕ್ಷದ ಮುಖಂಡರಾದ ಬಿದರಿಕೆರೆ ಜಯರಾಂ, ಜೆಡಿಎಸ್ ಜಿಲ್ಲಾ ವಕ್ತಾರ ಹೊಂಗರೆ ರಘು, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್, ಸ್ವಾಮಿಗೌಡ, ಗೋಪಾಲ್ ಇದ್ದರು.ಹಾಸನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗೊರೂರಿನ ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಎಚ್‌.ಡಿ.ರೇವಣ್ಣ ಮಾತನಾಡಿದರು.