ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಜನರು ಜಾಗೃತರಾದರೆ ಡೆಂಘೀಯಂತಹ ಮಾರಕ ರೋಗಗಳನ್ನು ನಿಯಂತ್ರಿಸಬಹುದು ಎಂದು ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ತಿಳಿಸಿದರು.ನಗರದ ಮಹದೇವಪುರ ಆರೋಗ್ಯ ಮತ್ತು ಕ್ಷೇಮ ಉಪಕೇಂದ್ರದಲ್ಲಿ ಜನಸೇವಕ ಯುವ ಬ್ರಿಗೇಡ್ ವತಿಯಿಂದ ವಿಶ್ವ ಯೋಗ ದಿನ ಹಾಗೂ ವೈದ್ಯರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಉಚಿತ ಹೃದಯ ಸಂಬಂಧಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಮನೆಯ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಮನೆಯ ಅಕ್ಕಪಕ್ಕ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಡೆಂಘೀ ಮಾರಕ ರೋಗ. ತೀವ್ರ ತಲೆನೋವು, ತೀವ್ರವಾದ ಸ್ನಾಯು ಅಥವಾ ಕೀಲು ನೋವು, ವಾಂತಿ, ಕಣ್ಣುನೋವು, ವಾಕರಿಕೆ ಮತ್ತು ಚರ್ಮದ ದದ್ದುಗಳು ಕಂಡಬಂದರೆ ತಕ್ಷಣ ಸಮೀಪದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.ಜೀವದಾರ ರಕ್ತ ನಿಧಿ ನಿರ್ದೇಶಕ ಗಿರೀಶ್ ಮಾತನಾಡಿ, ದೇಹಕ್ಕೆ ಆಹಾರ ಹೇಗೆ ಅಗತ್ಯವೋ, ಹಾಗೆಯೇ ಪ್ರತಿನಿತ್ಯ ಯೋಗ ಮತ್ತು ಧ್ಯಾನದ ಅಭ್ಯಾಸ ಅವಶ್ಯಕವಾಗಿವೆ. ಅಷ್ಟಾಂಗ ಯೋಗದ ಅನುಷ್ಠಾನದಿಂದ ಚಿತ್ತಚಂಚಲತೆ ನಿವಾರಣೆಯಾಗಿ ಮಾನಸಿಕ ಸ್ಥಿರತೆ ದೊರೆತು ವಿವೇಕ ಲಭಿಸುವುದು. ಶ್ವಾಸಕೋಶ ಸಂಬಂಧಿ ರೋಗಗಳಿಗೆ ಯೋಗ ಅತ್ಯಂತ ಪರಿಣಾಮಕಾರಿಯಾಗಿದೆ. ಹೀಗಾಗಿ, ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗ ಅಳವಡಿಸಿಕೊಳ್ಳಬೇಕು ಎಂದರು.
ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ 100 ಹೆಚ್ಚು ಜನರ ಹಿಮೋಗ್ಲೋಬಿನ್, ರಕ್ತದ ಗುಂಪು, ಸಕ್ಕರೆ ಪ್ರಮಾಣ, ಥೈರಾಯ್ಡ್ ಪರೀಕ್ಷೆ, ಸಕ್ಕರೆ ಕಾಯಿಲೆ ಪರೀಕ್ಷೆ, ಅಲ್ಟ್ರಾಸೋನೋಗ್ರಫಿ, ಇಸಿಜಿ ಹೃದಯದ ಪರೀಕ್ಷೆ ಮಾಡಿಸಿಕೊಂಡರು. ಇದೇ ವೇಳೆ 30 ಹೆಚ್ಚು ಜನ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷ ಡಿ. ರಾಘವೇಂದ್ರ, ಸಮರ್ಥ ಶಕ್ತಿ ಸೇವಾ ಸಂಸ್ಥೆ ಅಧ್ಯಕ್ಷೆ ಎಂ. ಮೋನಿಕಾ, ಬಿಜೆಪಿ ಮುಖಂಡರಾದ ಕಿರಣ್ ನಾಯ್ಡು, ಸವಿತಾ ಪುಟ್ಟೇಗೌಡ, ಸಮಾಜ ಸೇವಕರಾದ ಕಲ್ಪನಾ, ನವೀನಗೌಡ ಮೊದಲಾದವರು ಇದ್ದರು.ಇಂದಿನಿಂದ ಉಚಿತ ಚರ್ಮರೋಗ ತಪಾಸಣೆ ಶಿಬಿರ
ಮೈಸೂರು: ನಗರದ ಸುಯೋಗ್ ಆಸ್ಪತ್ರೆ ವತಿಯಿಂದ ಜು.8 ರಿಂದ 13 ರವರೆವಿಗೆ ಉಚಿತ ಚರ್ಮರೋಗ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಚರ್ಮರೋಗ ತಜ್ಞ ವೈದ್ಯ ಡಾ. ಶ್ರೇಯಸ್ ಶಂಕರ್ ಅವರ ನೇತೃತ್ವದಲ್ಲಿ ಈ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಉಚಿತ ಸಮಾಲೋಚನೆ ಇದ್ದು, ಕೂದಲು ಉದುರುವಿಕೆ, ಚರ್ಮದ ತೊಂದರೆಗಳು, ಮುಖದಲ್ಲಿ ಮೊಡವೆಗಳು ಮುಂತಾದ ಸಮಸ್ಯೆಗಳಿರುವವರು ಕೂಡಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ದೂ. 0821- 2533600, 99863 99862 ಸಂಪರ್ಕಿಸಬಹುದು.