ಸಾರಾಂಶ
ಧಾರವಾಡ:
ನಿಯಂತ್ರಣ ಕ್ರಮಗಳಿಂದ ಮಾತ್ರ ಡೆಂಘೀ ರೋಗವು ಹತೋಟಿಗೆ ಬರಲಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಜಾಗೃತಿಯೊಂದಿಗೆ ವಾರದ ದಿನ ಶುಕ್ರವಾರ ಸೊಳ್ಳೆ ನಿರ್ಮೂಲನೆ, ಹಾಟಸ್ಪಾಟ್ ಕೇಂದ್ರ ಸ್ಥಾಪನೆ, ಬೇವಿನ ಎಣ್ಣೆ ವಿತರಣೆ ಅಂತಹ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ತಾಲೂಕಿನ ಅಮ್ಮಿನಬಾವಿ ವಾಲ್ಮಿಕಿ ಭವನದಲ್ಲಿ ಆಯೋಜಿಸಿದ್ದ ವಾರದ ಶುಕ್ರವಾರ ಸೊಳ್ಳೆ ನಿರ್ಮೂಲನೆ ದಿನಾಚರಣೆ ಉದ್ಘಾಟಿಸಿದ ಅವರು, ಡೆಂಘೀ ರೋಗದ ಆತಂಕ ಬೇಡ. ಎಲ್ಲರೂ ಅದರಲ್ಲೂ ಸಾರ್ವಜನಿಕರು ಒಗ್ಗಟ್ಟಾಗಿ ನಿಯಂತ್ರಣಕ್ಕೆ ಕೈ ಜೋಡಿಸಿದರೆ ಬಹುಬೇಗ ನಿಯಂತ್ರಣಕ್ಕೆ ಬರಲಿದೆ. ಬೆಳಿಗ್ಗೆ ಸಮಯದಲ್ಲಿಯೇ ಡೆಂಘೀ ರೋಗ ತರುವ ಸೊಳ್ಳೆ ವಿಶೇಷವಾಗಿ ಮಕ್ಕಳಿಗೆ ಕಚ್ಚಲಿದ್ದು ಜನರು ಎಚ್ಚರ ವಹಿಸಬೇಕು. ಜ್ವರ ಬಂದರೆ ತಪ್ಪದೇ ವೈದ್ಯರನ್ನು ಸಂಪರ್ಕಿಸಬೇಕೆಂಬ ಸಲಹೆ ನೀಡಿದರು.
ಜುಲೈ 25ರ ವರೆಗೆ ಜಿಲ್ಲೆಯಲ್ಲಿ ಒಟ್ಟಾರೆ 3500 ಜನರಿಗೆ ಡೆಂಘೀ ಪರೀಕ್ಷೆ ಮಾಡಿದ್ದು ಈ ಪೈಕಿ 521 ಪಾಸಿಟಿವ್ ಪ್ರಕರಣಗಳು ಹಾಗೂ ಒಂದು ಬಾಲಕಿ ಮೃತಪಟ್ಟಿದೆ. ಜುಲೈ 25ರಂದು ನಡೆದ 150 ಜನರ ಪರೀಕ್ಷೆಯಲ್ಲಿ ಏಳು ಮಾತ್ರ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 15 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.ಡೆಂಘೀ ನಿಯಂತ್ರಣಕ್ಕಾಗಿ ಜಿಲ್ಲಾಸ್ಪತ್ರೆ, ಕಿಮ್ಸ್ ಸೇರಿದಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಘೀ ರೋಗಿಗಳಿಗಾಗಿ ಪ್ರತ್ಯೇಕ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಅಗತ್ಯ ಔಷಧಿ ಸಹ ಸಂಗ್ರಹ ಮಾಡಲಾಗಿದೆ. ಸರ್ಕಾರದ ನಿರ್ದೇಶನದಂತೆ ಎಲ್ಲರಿಗೂ ಬೇವಿನ ಎಣ್ಣೆ ಸಹ ವಿತರಣೆ ಮಾಡಲಾಗಿದೆ. ಜೊತೆಗೆ ಒಂದು ವಾರದ ಪರೀಕ್ಷೆಯಲ್ಲಿ ಯಾವ ಪ್ರದೇಶದಲ್ಲಿ ಹೆಚ್ಚು ಡೆಂಘೀ ಪ್ರಕರಣಗಳು ದಾಖಲಾಗುತ್ತವೆಯೋ ಆ ಪ್ರದೇಶವನ್ನು ಹಾಟ್‌ಸ್ಪಾಟ್ ಎಂದು ಗುರುತಿಸಿ ಅಲ್ಲಿ ತಾತ್ಕಾಲಿಕ ಫೀವರ್ ಕ್ಲಿನಿಕ್ ಆರಂಭಿಸಲಾಗುತ್ತಿದೆ. ಇದರಿಂದ ಆ ಪ್ರದೇಶದ ಶಂಕಿತ ಡೆಂಘೀ ಪ್ರಕರಣಗಳನ್ನು ಬೇಗ ಪತ್ತೆ ಹಚ್ಚಿ ನಿಯಂತ್ರಿಸಲು ಸುಲಭ ಆಗಲಿದೆ. ಹಾಟ್‌ಸ್ಪಾಟ್ ಪ್ರದೇಶದಲ್ಲಿ ಬೇವಿನ ಎಣ್ಣೆ ವಿತರಣೆ ಕಾರ್ಯಕ್ರಮ ಸಹ ನಡೆಯುತ್ತಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಮಾತನಾಡಿದರು. ಗ್ರಾಮದ ಶಾಂತೇಶ್ವರ ಪ್ರೌಢ ಶಾಲೆಯ ಮಕ್ಕಳು ಡೆಂಘೀ ಕುರಿತಾದ ಜಾಗೃತಿ ನಾಟಕವನ್ನು ಅದ್ಭುತವಾಗಿ ಪ್ರದರ್ಶಿಸಿದರು. ಇದಾದ ಬಳಿಕ ಜಿಲ್ಲಾಧಿಕಾರಿಗಳು ಗ್ರಾಮದ ಕೆಲವು ಮನೆಗಳಿಗೆ ತೆರಳಿ ಬೇವಿನ ಎಣ್ಣೆ ನೀಡಿ ಡೆಂಘೀ ಕುರಿತು ಜಾಗೃತಿ ಮೂಡಿಸದರು. ಗ್ರಾಪಂ ಅಧ್ಯಕ್ಷರು, ತಾಲೂಕು ಆರೋಗ್ಯಾಧಿಕಾರಿಗಳು ಇದ್ದರು.