ಸಾರಾಂಶ
ಕುಷ್ಟಗಿ ತಾಲೂಕಿನಲ್ಲಿ ಡೆಂಘೀ ಪ್ರಕರಣ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದ್ದು, ತಾಲೂಕಿನ ಜನರಲ್ಲಿ ಆತಂಕ ಹೆಚ್ಚಿದೆ.
ತಾಲೂಕಿನ ಜನರಲ್ಲಿ ಆತಂಕ, ಗ್ರಾಮ ಸ್ವಚ್ಛತೆಗೆ ಆರೋಗ್ಯ ಇಲಾಖೆಯಿಂದ ಜಾಗೃತಿ
ಪರಶಿವಮೂರ್ತಿ ದೋಟಿಹಾಳಕನ್ನಡಪ್ರಭ ವಾರ್ತೆ ಕುಷ್ಟಗಿ
ಕುಷ್ಟಗಿ ತಾಲೂಕಿನಲ್ಲಿ ಡೆಂಘೀ ಪ್ರಕರಣ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದ್ದು, ತಾಲೂಕಿನ ಜನರಲ್ಲಿ ಆತಂಕ ಹೆಚ್ಚಿದೆ.ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಈಗಾಗಲೇ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದು, ಡೆಂಘೀ ನಿಯಂತ್ರಣಕ್ಕೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಅಗತ್ಯ ಎಂಬ ಅಭಿಪ್ರಾಯ ಕೇಳಿಬಂದಿದೆ.
ಕುಷ್ಟಗಿ ಪಟ್ಟಣ ಹಾಗೂ ತಾಲೂಕಿನ ಸಾಸ್ವಿಹಾಳ, ಬಚನಾಳ, ಮುದುಟಗಿ, ಬಳೂಟಗಿ, ಹುಲಸಗೇರಾ, ಜುಂಜಲಕೊಪ್ಪ ಮತ್ತಿತರ ಗ್ರಾಮಗಳಲ್ಲಿ ಒಟ್ಟು ಎಂಟು ಜನರಲ್ಲಿ ಡೆಂಘಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜ್ವರ ಬಾಧೆಗೆ ಒಳಗಾದವರು ಈಗಾಗಲೇ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ.ವೈರಲ್ ಜ್ವರ:
ಮುಂಗಾರು ಹಂಗಾಮಿನಲ್ಲಿ ಮೋಡ ಕವಿದ ವಾತಾವರಣದ ಪರಿಣಾಮವಾಗಿ ಜನರಿಗೆ ವೈರಲ್ ಜ್ವರವೂ ಬಾಧಿಸುತ್ತಿದೆ. ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿದೆ.ರಾಜ್ಯಾದ್ಯಂತ ಡೆಂಘೀ ಲಕ್ಷಣಗಳು ವ್ಯಾಪಕವಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಕುಷ್ಟಗಿ ತಾಲೂಕಿನಲ್ಲಿರುವ ಎಲ್ಲ ಗ್ರಾಮಗಳಲ್ಲಿ ಗ್ರಾಪಂ ವತಿಯಿಂದ ಬ್ಲೀಚಿಂಗ್ ಪೌಡರ್ ಹಾಕಿಸುವುದು ಹಾಗೂ ಫಾಗಿಂಗ್ ಮಾಡಿಸುವ ಕಾರ್ಯವೂ ನಡೆದಿದೆ. ಕೆಲವು ಗ್ರಾಮಗಳಲ್ಲಿ ಇನ್ನೂ ನಡೆಯಬೇಕಾಗಿದ್ದು, ಆದಷ್ಟು ಶೀಘ್ರದಲ್ಲಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಲಾರ್ವಾ ಸರ್ವೆ:ಪಟ್ಟಣ ಸೇರಿದಂತೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಆಶಾ ಕಾರ್ಯಕರ್ತರೊಡನೆ ತಂಡಗಳನ್ನು ರಚನೆ ಮಾಡಿಕೊಂಡು ಪ್ರತಿದಿನವೂ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುವ ಜತೆಗೆ ಡೆಂಘೀ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡುತ್ತಿದ್ದಾರೆ. ಸೊಳ್ಳೆಗಳು ಉತ್ಪತ್ತಿಯಾಗಬಹುದಾದ ತಾಣಗಳನ್ನು ಪರಿಶೀಲಿಸುತ್ತಿದ್ದಾರೆ. ಆರೋಗ್ಯದ ಕುರಿತು ಜನರಿಗೆ ತಿಳಿಹೇಳುವ ಜತೆಗೆ ಅಗತ್ಯವಿರುವ ಕಡೆ ಔಷಧ ವಿತರಿಸುತ್ತಿದ್ದಾರೆ. ಡೆಂಘೀ ಲಕ್ಷಣ ಕಂಡುಬಂದರೆ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಸೂಚಿಸುತ್ತಿದ್ದಾರೆ.ಈಗಾಗಲೇ ಕುಷ್ಟಗಿ ತಾಲೂಕಿನಲ್ಲಿ ಎಂಟು ಡೆಂಘೀ ಪ್ರಕರಣಗಳು ಕಂಡು ಬಂದಿದ್ದು, ಫಾಗಿಂಗ್ ಮಾಡುವಂತೆ ತಾಪಂ ಇಒ ಮೂಲಕ ಗ್ರಾಪಂ ಅಧಿಕಾರಿಗಳಿಗೆ ತಿಳಿಸಲಾಗಿದೆ. ಫಾಗಿಂಗ್ ಕಾರ್ಯವೂ ನಡೆದಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಸರ್ವೆ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಡೆಂಘಿ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದು ಆರೋಗ್ಯಾಧಿಕಾರಿ ಡಾ. ಆನಂದ ಗೋಟೂರ ತಿಳಿಸಿದ್ದಾರೆ.