ಸಾರಾಂಶ
ಹಾನಗಲ್ಲ: ಡೆಂಘೀ ನಿಯಂತ್ರಣದ ಹಿನ್ನೆಲೆಯಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಣೆಗೆ ಮುಂದಾಗಬೇಕು. ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಸಹ ದಿನದ ೨೪ ಗಂಟೆಗಳ ಕಾಲ ಸಾರ್ವಜನಿಕರಿಗೆ ಸೇವೆ ದೊರಕಬೇಕು. ಚಿಕಿತ್ಸೆಗೆ ನಗರ ಪ್ರದೇಶಗಳಿಗೆ ಅಲೆದಾಡಿ ಕಾಲಹರಣ ಮಾಡುವಂತಾಗಬಾರದು. ಈ ನಿಟ್ಟಿನಲ್ಲಿ ಜವಾಬ್ದಾರಿ ವಹಿಸಿ ಎಂದು ಶಾಸಕ ಶ್ರೀನಿವಾಸ ಮಾನೆ ಸೂಚನೆ ನೀಡಿದರು. ಹಾನಗಲ್ ತಾಲೂಕಿನ ಆರೋಗ್ಯಇಲಾಖೆಯ ಅಧಿಕಾರಿಗಳು, ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ದಾದಿಯರೊಂದಿಗೆ ಗೂಗಲ್ ಮೀಟ್ ಮೂಲಕ ವಿಶೇಷ ಸಭೆ ನಡೆಸಿದ ಅವರು ಕೊರೊನಾ ಸಮಯದಲ್ಲಿ ಯುದ್ಧೋಪಾದಿಯ ರೀತಿಯಲ್ಲಿ ನಿರ್ವಹಿಸಿದ ಕರ್ತವ್ಯವನ್ನೂ ಈ ಸಮಯದಲ್ಲಿಯೂ ನಿರ್ವಹಿಸಬೇಕಾಗಿದೆ. ಡೆಂಘೀ ಲಕ್ಷಣಗಳನ್ನು ಕೂಡಲೇ ಗುರುತಿಸಿ ಚಿಕಿತ್ಸೆಆರಂಭಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಗಳ ಸಂಗ್ರಹ ಮಾಡಿಟ್ಟುಕೊಳ್ಳಿ. ನಾನೂ ಸಹ ಯಾವುದೇ ಮುನ್ಸೂಚನೆ ನೀಡದೇ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವೆ. ಲೋಪದೋಷ ಕಂಡು ಬಂದರೆ ಕ್ರಮಜರುಗಿಸುವ ಎಚ್ಚರಿಕೆ ನೀಡಿದರು. ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ. ಆಶಾ ಕಾರ್ಯಕರ್ತೆಯರೊಂದಿಗೆ ಸಮುದಾಯ ಜಾಗೃತಿ ಸಭೆಗಳನ್ನು ಪ್ರತಿ ಗ್ರಾಮಗಳಲ್ಲಿಯೂ ಸಹ ನಡೆಸಿ. ಲಾರ್ವಾ ಸಮೀಕ್ಷೆ ಚುರುಕುಗೊಳಿಸಿ. ಮನೆಗಳಲ್ಲಿ ಸೊಳ್ಳೆ ಪರದೆ ಬಳಸಲು ಉತ್ತೇಜನ ನೀಡಿ. ಗ್ರಾಪಂಗಳ ಸಹಕಾರ ಪಡೆದು ಕೀಟನಾಶಕ ಔಷಧ ಸಿಂಪಡಣೆ ಮಾಡಲಾಗುತ್ತಿರುವುದನ್ನು ಗಮನಿಸಿ ಎಂದು ಶ್ರೀನಿವಾಸ ಮಾನೆ ಸೂಚಿಸಿದರು.ಟಿಎಚ್‌ಓ ಡಾ.ಲಿಂಗರಾಜ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರನ್ನು ನಿಯೋಜಿಸಿ ಚಿಕಿತ್ಸೆದೊರಕುವಂತೆ ಕಾಳಜಿ ವಹಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಜ್ವರ ಪೀಡಿತರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಡೆಂಘೀ ಪೀಡಿತರು ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗುತ್ತಿದ್ದಾರೆ ಎಂದು ವಿವರಣೆ ನೀಡಿದರು. ವೈದ್ಯಾಧಿಕಾರಿಗಳು, ಸಿಬ್ಬಂದಿ ಮತ್ತು ದಾದಿಯರು ಸಭೆಯಲ್ಲಿ ಭಾಗವಹಿಸಿದ್ದರು.